ಕ್ರೈಸ್ಟ್ಚರ್ಚ್ನಲ್ಲಿ 2ನೇ ದಿನದ ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ಮೊದಲ ದಿನದ ಖದರ್ ಉಳಿಸಿಕೊಂಡಿರಲಿಲ್ಲ. ತೆಂಬ ಬವುಮಾ 29 ರನ್ಗಳಿಸಿ ಹೆನ್ರಿಗೆ ವಿಕೆಟ್ ಒಪ್ಪಿಸಿದರು. ಕೈಕ್ ವೆರಿನ್ (4) ಮತ್ತು ವಿಯಾನ್ ಮೌಲ್ಡರ್ (14) ಬ್ಯಾಟಿಂಗ್ನಲ್ಲಿ ತಂಡಕ್ಕೆ ನೆರವಾಗಲಿಲ್ಲ. ಕಲ್ಲುಬಂಡೆಯಂತೆ ನಿಂತು ಆಡುತ್ತಿದ್ದ ರಾಸಿ ವಾಂಡರ್ ಡ್ಯುಸನ್ 35 ರನ್ಗಳಿಸಿ ನಿರ್ಗಮಿಸಿದರು.
ಮಾರ್ಕೋ ಜನ್ಸೆನ್ ಅಜೇಯ 37 ರನ್ಗಳಿಸಿ ತಂಡಕ್ಕೆ ಆಧಾರವಾದರು. ಕಗಿಸೋ ರಬಾಡಾ 6 ರನ್ಗಳನ್ನಷ್ಟೇ ಗಳಿಸಿದರು. ಕೇಶವ್ ಮಹಾರಾಜ್ 36 ರನ್ಗಳಿಸಿದ್ದರಿಂದ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ನಲ್ಲಿ 364 ರನ್ಗಳಿಸುಂವತಾಯಿತು. ನ್ಯೂಜಿಲೆಂಡ್ ಬೌಲಿಂಗ್ನಲ್ಲಿ ನೈಲ್ ವ್ಯಾಗ್ನರ್ 4 ವಿಕೆಟ್ ಪಡೆದರೆ, ಮ್ಯಾಟ್ ಹೆನ್ರಿ 3 ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ನಾಯಕ ಟಾಮ್ ಲೇಥಮ್ ವಿಕೆಟ್ ಅನ್ನು ಮೊದಲ ಓವರ್ನಲ್ಲೇ ಕಳೆದುಕೊಂಡಿತು. ರಬಾಡಾ ವಿಲ್ ಯಂಗ್ ವಿಕೆಟ್ಪಡೆದು ಸಂಭ್ರಮಿಸಿದರು. ಮಾರ್ಕೋ ಜನ್ಸೆನ್ ಡೆವೊನ್ ಕಾನ್ವೆ ವಿಕೆಟ್ ಹಾರಿಸಿದರು.
ಹೆನ್ರಿ ನಿಕೊಲಸ್ ಮತ್ತು ಡೆರಿಲ್ ಮಿಚೆಲ್ ತಂಡಕ್ಕೆ ಆಧಾರವಾಗುವ ಸೂಚನೆ ನೀಡಿದರು. ಆದರೆ ಜನ್ಸೆನ್ 39 ರನ್ಗಳಿಸಿದ್ದ ನಿಕೊಲಸ್ ವಿಕೆಟ್ ಪಡೆದು ಬ್ರೇಕ್ ತಂದುಕೊಟ್ಟರು. ಡೆರಿಲ್ ಮಿಚೆಲ್ ಜೊತೆ ಸೇರಿದ ಕಾಲಿನ್ ಡಿ ಗ್ರಾಂಡ್ ಹೋಮ್ ಕೌಂಟರ್ ಅಟ್ಯಾಕ್ ಮಾಡಿದರು. ಕೇವಲ 37 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿ ಆಫ್ರಿಕನ್ ಬೌಲರ್ಗಳಿಗೆ ಉತ್ತರ ಕೊಟ್ಟರು.
ದಿನದ ಅಂತ್ಯಕ್ಕೆ ನ್ಯೂಜಿಲೆಂಡ್ 5 ವಿಕೆಟ್ ಕಳೆದುಕೊಂಡು 157 ರನ್ಗಳಿಸಿದೆ. ಡೆರಿಲ್ ಮಿಚೆಲ್ 29 ಮತ್ತು ಕಾಲಿನ್ ಡಿ ಗ್ರಾಂಡ್ ಹೋಮ್ 54 ರನ್ಗಳಿಸಿ 3ನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ. ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 207 ರನ್ಗಳ ಹಿನ್ನಡೆಯಲ್ಲಿದೆ.