ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಶ್ರೀಲಂಕಾ ತಂಡದ ಆಲ್ರೌಂಡರ್ ವನಿಂದು ಹಸರಂಗ, ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಹೊರಗುಳಿಯಲಿದ್ದಾರೆ.
ಶ್ರೀಲಂಕಾ ತಂಡದ ಪ್ರಮುಖ ಬೌಲರ್ ಆಗಿರುವ ವನಿಂದು ಹಸರಂಗ, ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ತೊಡೆಸಂದು ಸಮಸ್ಯೆಗೆ ಸಿಲುಕಿದ್ದರು. ಇದೇ ಕಾರಣದಿಂದ 2ನೇ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ಹಸರಂಗ, ಈವರೆಗೂ ಚೇತರಿಸಿಕೊಂಡಿಲ್ಲ. ಹೀಗಾಗಿ 3ನೇ ಏಕದಿನ ಪಂದ್ಯಕ್ಕೂ ವನಿಂದು ಹಸರಂಗ ಅಲಭ್ಯರಾಗಲಿದ್ದಾರೆ.
ವನಿಂದು ಹಸರಂಗ ಅವರ ಗಾಯದ ಸಮಸ್ಯೆ ಬಗ್ಗೆ ತಂಡದ ವೈದ್ಯಕೀಯ ತಂಡ ನಿಗಾವಹಿಸುತ್ತಿದ್ದು, ಹಸರಂಗ ಅವರ ಆರೋಗ್ಯದ ಬಗ್ಗೆ ಪ್ರತಿನಿತ್ಯ ತಂಡದ ಮ್ಯಾನೇಜ್ಮೆಂಟ್ಗೆ ಮಾಹಿತಿ ನೀಡುತ್ತಿದೆ. ವನಿಂದು ಹಸರಂಗ ಶೀಘ್ರವೇ ಚೇತರಿಸಿಕೊಳ್ಳುವ ವಿಶ್ವಾಸವಿದ್ದು, ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ತಂಡದಲ್ಲಿ ಉಳಿಯಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಮಾಹಿತಿ ನೀಡಿದೆ.
ತವರಿನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಶ್ರೀಲಂಕಾ ಪಾಲಿಗೆ ಪ್ರಮುಖ ಸರಣಿಯಾಗಿದೆ. ಭಾರತದಲ್ಲಿ ನಡೆಯುವ 2023ರ ಏಕದಿನ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಈ ಸರಣಿ ಮುಖ್ಯವಾಗಲಿದೆ. ಸದ್ಯ ಲೀಗ್ ಟೇಬಲ್ 9ನೇ ಸ್ಥಾನದಲ್ಲಿರುವ ಶ್ರೀಲಂಕಾ, ಈ ಸರಣಿಯ ಗೆದ್ದು ಟೇಬಲ್ನಲ್ಲಿ ಮೇಲಕ್ಕೇರುವ ನಿರೀಕ್ಷೆ ಹೊಂದಿದೆ. ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಸೋಲಿನ ಆಘಾತ ಕಂಡಿದ್ದ ಶ್ರೀಲಂಕಾ, 2ನೇ ಪಂದ್ಯದಲ್ಲಿ ಸ್ಟ್ರಾಂಗ್ ಕಮ್ಬ್ಯಾಕ್ ಮಾಡುವ ಮೂಲಕ ಗೆದ್ದುಬೀಗಿತ್ತು. ಸದ್ಯ ಉಭಯ ತಂಡಗಳು ಸರಣಿಯಲ್ಲಿ 1-1ರ ಸಮಬಲ ಸಾಧಿಸಿದ್ದು, ಸರಣಿಯ 3ನೇ ಪಂದ್ಯ ಜೂ.19ರಂದು ನಡೆಯಲಿದೆ.