ಆಸ್ಟ್ರೇಲಿಯಾ ವಿರುದ್ದದ ಏಕದಿನ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಶ್ರೀಲಂಕಾ, ತವರಿನಲ್ಲಿ 30 ವರ್ಷಗಳ ಬಳಿಕ ಏಕದಿನ ಸರಣಿ ಗೆದ್ದು ಇತಿಹಾಸ ಸೃಷ್ಟಿಸಿದೆ.
ಕೊಲಂಬೊದಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ನೀಡಿದ ಶ್ರೀಲಂಕಾ, ಚರಿತ್ ಅಸಲಂಕ ಅವರ ಅದ್ಭುತ ಶತಕದ ನೆರವಿನಿಂದ 4 ರನ್‌ಗಳ ರೋಚಕ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ 3-1ರ ಅಂತರದಿಂದ ಸರಣಿ ವಶಪಡಿಸಿಕೊಂಡಿರುವ ಲಂಕಾ ಪಡೆ, ತವರು ನೆಲದಲ್ಲಿ 30 ವರ್ಷದ ಬಳಿಕ ಏಕದಿನ ಸರಣಿ ಗೆದ್ದುಬೀಗಿದೆ. ಲಂಕಾ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಚರಿತ್ ಅಸಲಂಕ(110) ಭರ್ಜರಿ ಶತಕ ಸಿಡಿಸಿ ಮಿಂಚಿದರೆ, ಧನಂಜಯ ಡಿಸಿಲ್ವಾ(60) ಜವಾಬ್ದಾರಿಯ ಬ್ಯಾಟಿಂಗ್‌ನಿಂದ ತಂಡಕ್ಕೆ ಆಸರೆಯಾದರು. ಈ ಹಿಂದೆ 1992ರಲ್ಲಿ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆದಿದ್ದ ಏಕದಿನ ಸರಣಿಯಲ್ಲಿ ಶ್ರೀಲಂಕಾ, ಸರಣಿ ಗೆಲುವು ಕಂಡಿತ್ತು. ಇದಾದ ಬಳಿಕ ಅತಿಥೇಯ ಶ್ರೀಲಂಕಾ, ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ಕಂಡಿರಲಿಲ್ಲ. ಅಲ್ಲದೇ ಇತ್ತೀಚಿನ ವರ್ಷಗಳಲ್ಲಿ ಯಾವುದೇ ಏಕದಿನ ಸರಣಿಯನ್ನು ಗೆಲ್ಲದ ಲಂಕಾ ಪಡೆ, 2010ರ ಬಳಿಕ ಪಡೆಯುತ್ತಿರುವ ಮೊದಲ ಏಕದಿನ ಸರಣಿ ಇದಾಗಿದೆ.
ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಸೋಲಿನ ಆಘಾತ ಕಂಡಿದ್ದ ಶ್ರೀಲಂಕಾ, ನಂತರದ ಮೂರು ಪಂದ್ಯಗಳಲ್ಲಿ ಬಲಿಸ್ಟ್ ಕಮ್ ಬ್ಯಾಕ್ ಮಾಡಿತ್ತು. 2ನೇ ಏಕದಿನ ಪಂದ್ಯದಲ್ಲಿ 26 ರನ್‌ಗಳ ಗೆಲುವು ಕಂಡಿದ್ದ ಶ್ರೀಲಂಕಾ, 3ನೇ ಪಂದ್ಯದಲ್ಲಿ 6 ವಿಕೆಟ್‌ಗಳ ಜಯ ಹಾಗೂ 4ನೇ ಪಂದ್ಯದಲ್ಲಿ 4 ರನ್‌ಗಳ ಜಯದೊಂದಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಆ ಮೂಲಕ ಸರಣಿಯಲ್ಲಿ ಇನ್ನು ಒಂದು ಪಂದ್ಯ ಬಾಕಿಯಿರುವಂತೆ ಪ್ರಶಸ್ತಿ ತನ್ನದಾಗಿಸಿಕೊಂಡು ಹೊಸ ಇತಿಹಾಸ ಬರೆದಿದೆ. ಉಭಯ ತಂಡಗಳ ನಡುವಿನ ಕೊನೆಯ ಏಕದಿನ ಪಂದ್ಯ ಜೂ.24ರಂದು ಕೊಲಂಬೊದಲ್ಲಿ ನಡೆಯಲಿದೆ. ಏಕದಿನ ಸರಣಿ ಬಳಿಕ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮತ್ತೆ ಮುಖಾಮುಖಿಯಾಗಲಿವೆ.