ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಸಂಘಟಿತ ಪ್ರದರ್ಶನದ ಮೂಲಕ ಕಮ್ಬ್ಯಾಕ್ ಮಾಡಿದ ಶ್ರೀಲಂಕಾ ತವರಿನಲ್ಲಿ ಅಫ್ಘಾನಿಸ್ತಾನದ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ 132 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಶ್ರೀಲಂಕಾದ ಹಂಬಂಟೋಟದ ಮಹಿಂದ ರಾಜಪಕ್ಸ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಶ್ರೀಲಂಕಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಪರಿಣಾಮ ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 323 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಗುರಿಯನ್ನ ಬೆನ್ನತ್ತಿದ ಅಫ್ಘಾನಿಸ್ತಾನ 42.1 ಓವರ್ಗಳಲ್ಲಿ 191 ರನ್ಗಳಿಸಿ ಆಲೌಟ್ ಆಗುವ ಮೂಲಕ 132 ರನ್ಗಳ ಭಾರೀ ಅಂತರದ ಸೋಲು ಕಂಡಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಎರಡು ತಂಡಗಳ 1-1ರಿಂದ ಸಮಬಲ ಸಾಧಿಸಿವೆ.
ಲಂಕಾ ಸಂಘಟಿತ ಬ್ಯಾಟಿಂಗ್:
ಮೊದಲು ಬ್ಯಾಟ್ ಮಾಡಿದ ಲಂಕಾ ಪರ ಆರಂಭಿಕರಾಗಿ ಕಣಕ್ಕಿಳಿದ ಪತುಮ್ ನಿಸ್ಸಂಕ(43) ಹಾಗೂ ಕರುಣಾರತ್ನೆ(52) ಮೊದಲು ವಿಕೆಟ್ಗೆ 82 ರನ್ ಕಲೆಹಾಕುವ ಮೂಲಕ ಉತ್ತಮ ಆರಂಭ ನೀಡಿದರು. ನಂತರದಲ್ಲಿ ಬಂದ ಕುಸಲ್ ಮೆಂಡಿಸ್ ಸಹ ಜವಾಬ್ದಾರಿಯ ಆಟವಾಡಿದರು. ಅಫ್ಘನ್ ಬೌಲರ್ಗಳ ವಿರುದ್ಧ ಹಿಡಿತ ಸಾಧಿಸಿದ ಕರುಣಾರತ್ನೆ(78 ರನ್, 75 ಬಾಲ್, 7 ಬೌಂಡರಿ, 1 ಸಿಕ್ಸ್) ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಇದಾದ ಬಳಿಕ ಬಂದ ಸಮರವಿಕ್ರಮ(44), ಧನಂಜಯ ಡಿಸಿಲ್ವಾ(29), ಶನಕ(23) ಹಾಗೂ ಹಸರಂಗ(29) ಉಪಯುಕ್ತ ರನ್ಗಳಿಸಿದರು. ಪರಿಣಾಮ ಲಂಕಾ ಪಡೆ 50 ಓವರ್ಗಳಲ್ಲಿ 323/6 ರನ್ ಕಲೆಹಾಕಿತು. ಅಫ್ಘಾನಿಸ್ತಾನದ ಪರ ಫರೀದ್ ಅಹ್ಮದ್, ಮೊಹಮ್ಮದ್ ನಬಿ ತಲಾ 2 ವಿಕೆಟ್ ಪಡೆದರು.
ಹಸರಂಗ-ಧನಂಜಯ ಮೋಡಿ:
ಶ್ರೀಲಂಕಾ ನೀಡಿದ ಬೃಹತ್ ಮೊತ್ತ ಚೇಸ್ ಮಾಡಿದ ಅಫ್ಘಾನಿಸ್ತಾನ ವನಿಂದು ಹಸರಂಗ(42/3) ಹಾಗೂ ಧನಂಜಯ ಡಿಸಿಲ್ವಾ(39/3) ಅವರ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿತು. ಪ್ರವಾಸಿ ತಂಡದ ಪರವಾಗಿ ಆರಂಭಿಕ ಬ್ಯಾಟರ್ ಇಬ್ರಾಹಿಂ ಜದ್ರಾನ್(54) ಹಾಗೂ ನಾಯಕ ಹಸ್ಮತುಲ್ಲಾ ಶಹೀದಿ(57) ಅರ್ಧಶತಕದ ನಡುವೆಯೂ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿತು. 42.1 ಓವರ್ಗಳಲ್ಲಿ 191 ರನ್ಗಳಿಸಿ ಆಲೌಟ್ ಆಗುವ ಮೂಲಕ 132 ರನ್ಗಳ ಭಾರೀ ಅಂತರದ ಸೋಲು ಕಂಡಿತು. ಲಂಕಾ ಪರ ಚಮೀರ 2, ತೀಕ್ಷಣ ಹಾಗೂ ಶನಕ ತಲಾ 1 ವಿಕೆಟ್ ಪಡೆದು ತಂಡದ ಗೆಲುವಿಗೆ ನೆರವಾದರು. ಉಭಯ ತಂಡಗಳ ನಡುವಿನ ಏಕದಿನ ಸರಣಿಯ ಕೊನೆಯ ಪಂದ್ಯ ಜೂ.7ರಂದು ನಡೆಯಲಿದೆ.
SL v AFG, Sri Lanka, Afghanistan, ODI Series, Sports Karnataka,