ಮುಲ್ಹೆಮ್ ಆ್ಯನ್ ಡರ್ ರುಹ್ರ್ (ಜರ್ಮನಿ): ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಭಾರತದ ಪಿ.ವಿ ಸಿಂಧು ಅವರು ಇಲ್ಲಿ ನಡೆಯುತ್ತಿರುವ ಜರ್ಮನಿ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.
ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಸಾಧನೆ ಮಾಡಿರುವ ಸಿಂಧು 21-8, 21-7 ರಿಂದ ಥಾಯ್ಲೆಂಡ್ ನ ಬುಸನನ್ ವಿರುದ್ಧ 32 ನಿಮಿಷಗಳ ಹೋರಾಟದಲ್ಲಿ ಜಯ ಸಾಧಿಸಿದರು.
ಮೊದಲ ಗೇಮ್ ನಿಂದಲೂ ಭರ್ಜರಿ ಆಟದ ಪ್ರದರ್ಶನ ನೀಡಿದ ಸಿಂಧು ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿದರು. ಎದುರಾಳಿ ಆಟಗಾರ್ತಿ ಅಂಕ ಗಳಿಸಲು ಪರದಾಟ ನಡೆಸಿದರು. ಪರಿಣಾಮ ವಿಶ್ವ ಚಾಂಪಿಯನ್ ಸಿಂಧು ಮೊದಲ ಗೇಮ್ ನಲ್ಲಿ ಬಿಗಿ ಹಿಡಿತ ಸಾಧಿಸಿ ಜಯ ಸಾಧಿಸಿದರು.
ಎರಡನೇ ಗೇಮ್ ನ ಆರಂಭದಲ್ಲಿ ಮೊದಲ ಅಂಕದ ನಗೆ ಬೀರಿದ ಥಾಯ್ಲೆಂಡ್ ಆಟಗಾರ್ತಿ ನಂತರ ಎಡವಿದರು. ಒಂದು ಹಂತದಲ್ಲಿ 7-5 ರಿಂದ ಮುನ್ನಡೆ ಸಾಧಿಸಿದ್ದ ಪಂದ್ಯದಲ್ಲಿ ಸಿಂಧು ಸತತ ಎಂಟು ಅಂಕಗಳನ್ನು ಸೇರಿಸಿ ಮಿಂಚಿದರು.
ಪುರುಷರ ಸಿಂಗಲ್ಸ್ ನಲ್ಲಿ ಕಿಡಂಬಿ ಶ್ರೀಕಾಂತ್ 21-10, 13-21, 21-7ರಿಂದ ಫ್ರಾನ್ಸ್ ನ ಬ್ರೈಸ್ ಲೆವರ್ಡೆಜ್ ಆಟಗಾರನ ವಿರುದ್ಧ 48 ನಿಮಿಷಗಳ ಹೋರಾಟದಲ್ಲಿ ಜಯ ಸಾಧಿಸಿ ಮುನ್ನಡೆದರು.