ಎಲ್ಲಾ ಕ್ರಿಕೆಟಿಗರು ರನ್ ಗಳಿಸದೇ ಇದ್ದರೆ ಅಥವಾ ವಿಕೆಟ್ ಪಡೆಯದೇ ಇದ್ದರೆ ಟೀಕೆಗಳನ್ನು ಎದುರಿಸುತ್ತಾರೆ. ಆದರೆ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಶತಕ ಗಳಿಸದೇ ಇರುವುದಕ್ಕೆ ಟೀಕೆ ಎದುರಿಸುತ್ತಿದ್ದಾರೆ. ದಕ್ಷಿಣ ಆಫ್ರಿಕಾ ಸರಣಿಯಲ್ಲಿ ವಿರಾಟ್ ಅರ್ಧಶತಕ ಸೇರಿದಂತೆ ಬ್ಯಾಟಿಂಗ್ನಲ್ಲಿ ಉತ್ತಮ ಆಟ ಆಡಿದ್ದಾರೆ. ಆದರೆ ಶತಕ ಮಾತ್ರ ಸಿಡಿಸಿಲ್ಲ. ವಿರಾಟ್ ಕೊಹ್ಲಿಯ ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಚರ್ಚೆಗಳು ಮುಂದುವರೆದಿದೆ. ಕೊಹ್ಲಿ ಬ್ಯಾಟಿಂಗ್ ಶತಕ ಸಿಡಿಸದೇ ಇರುವುದಕ್ಕೆ ಮದುವೆ ಆಗಿರುವುದೇ ಕಾರಣ ಎಂದು ಮಾಜಿ ಕ್ರಿಕೆಟಿಗರೊಬ್ಬರು ವಿಶ್ಲೇಷಿದ್ದಾರೆ.
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಕೊಹ್ಲಿ ಬಗ್ಗೆ ನೀಡಿರುವ ಹೇಳಿಕೆ ಈಗ ಟ್ರೋಲ್ ಆಗುತ್ತಿದೆ. ಮದುವೆಗೂ ಕ್ರಿಕೆಟ್ಗೂ ಏನು ಸಂಬಂಧ ಅನ್ನುವ ಮಾತುಗಳು ಶುರುವಾಗಿದೆ. ಆದರೆ ಅದಕ್ಕೂ ಅಖ್ತರ್ ಬಳಿ ಸಮಜಾಯಿಷಿ ಇದೆ. ಮದುವೆಯ ಒತ್ತಡವು ಅವರ ಆಟದ ಮೇಲೆ ನಿರ್ಣಾಯಕ ಪಾತ್ರವನ್ನು ವಹಿಸಿದೆ. ನಾನು ವಿರಾಟ್ ಕೊಹ್ಲಿಯ ಸ್ಥಾನದಲ್ಲಿದ್ದರೆ ಮದುವೆಯಾಗುತ್ತಿರಲಿಲ್ಲ ಎಂದು ಹೇಳುವ ಮೂಲಕ ನಗೆಪಾಟಲಿಗೆ ಈಡಾಗಿದ್ದಾರೆ.
“ವಿರಾಟ್ ನಾಯಕತ್ವವನ್ನು ತೊರೆದಿಲ್ಲ. ಆದರೆ ತೊರೆಯುವಂತೆ ಒತ್ತಡ ಹೇರಲಾಯಿತು. ಇದು ಅವರಿಗೆ ಉತ್ತಮ ಸಮಯವಲ್ಲ. ಹೀಗಾಗಿ ಅವರು ಎಂತಹ ಆಟಗಾರ ಎಂಬುದನ್ನು ಈಗ ಸಾಬೀತುಪಡಿಸಬೇಕಾಗಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಅವರು ಉಕ್ಕಿನಿಂದ ಅಥವಾ ಕಬ್ಬಿಣದಿಂದ ಮಾಡಲ್ಪಟ್ಟಿದ್ದಾರೆಯೇ? ಎಂಬುದು ಗೊತ್ತಾಗಲಿದೆ. ವಿರಾಟ್ 6-7 ವರ್ಷಗಳ ಕಾಲ ನಾಯಕತ್ವ ವಹಿಸಿದ್ದರು. ನಾನು ಅವರ ನಾಯಕತ್ವದ ಪರವಾಗಿ ಇಲ್ಲ. ಅವರು 100, 120 ರನ್ ಗಳಿಸಲು ಮತ್ತು ಅವರ ಬ್ಯಾಟಿಂಗ್‌ನತ್ತ ಗಮನ ಹರಿಸಬೇಕು”
-
ಶೋಬೆಯ್ ಅಖ್ತರ್, ಮಾಜಿ ಕ್ರಿಕೆಟಿಗ
ಕ್ರಿಕೆಟಿಗರ ಜೀವನದಲ್ಲಿ 10 ರಿಂದ 12 ವರ್ಷಗಳ ಕಾಲ ಉತ್ತುಂಗದ ಕಾಲ. ಈ ಪೈಕಿ 5 ರಿಂದ 6 ವರ್ಷಗಳ ಕಾಲ ಕ್ರಿಕೆಟಿಗನ ಜೀವನ ಮಹತ್ವದ್ದಾಗಿರುತ್ತದೆ. ಕೊಹ್ಲಿ ಈ ಸಮಯದಲ್ಲಿ ಮದುವೆಯ ಬದಲು ಆಟದ ಕಡೆಗೆ ಗಮನ ಕೊಡಬೇಕಿತ್ತು. ಆದರೆ ಮದುವೆಯ ಬಳಿಕ ಕುಟುಂಬದ ಕಡೆ ಗಮನಹಿರಸಬೇಕಾಗಿರುವುದರಿಂದ ಒತ್ತಡ ಹೆಚ್ಚಾಗುತ್ತದೆ ಎಂದು ಅಖ್ತರ್ ಅಭಿಪ್ರಾಯ ಪಟ್ಟಿದ್ದಾರೆ.
ಅಖ್ತರ್ ಈ ಮಾತುಗಳು ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ಹಲವು ಕ್ರಿಕೆಟಿಗರು ಮದುವೆಯ ಬಳಿಕ ಮಂಕಾಗಿರುವುದು ಸುಳ್ಳಲ್ಲ. ಇನ್ನು ಕೆಲವು ಕ್ರಿಕೆಟಿಗರು ಮದುವೆಯ ಬಳಿಕ ಅತ್ಯುತ್ತಮ ಆಟವನ್ನೂ ಪ್ರದರ್ಶಿಸಿದ್ದಾರೆ.