ಟೀಂ ಇಂಡಿಯಾದ ಮಾಜಿ ನಾಯಕರಾದ ವಿರಾಟ್ ಕೊಹ್ಲಿ, ಎಂ.ಎಸ್. ಧೋನಿ ಹಾಗೂ ಹಾಲಿ ನಾಯಕ ರೋಹಿತ್ ಶರ್ಮ ನಾಯಕತ್ವದ ಬಗ್ಗೆ ಆಸ್ಟ್ರೇಲಿಯಾ ಮಾಜಿ ಆಲ್ರೌಂಡರ್ ಶೇನ್ ವಾಟ್ಸನ್ ಕೊಂಡಾಡಿದ್ದಾರೆ.
ಭಾರತದ ಈ ತ್ರಿಮೂರ್ತಿಗಳ ನಾಯಕತ್ವದ ಬಗ್ಗೆ ಮಾತನಾಡಿರುವ ಶೇನ್ ವಾಟ್ಸನ್, ಮೂವರು ನಾಯಕರು ತಂಡವನ್ನು ಮುನ್ನಡೆಸುವ ವಿಷಯದಲ್ಲಿ ತಮ್ಮದೇ ಶೈಲಿಯನ್ನ ಹೊಂದಿದ್ದಾರೆ. ವಿರಾಟ್ ಕೊಹ್ಲಿ ʼಸೂಪರ್ಹ್ಯೂಮನ್ʼ ಆದರೆ, ಎಂ.ಎಸ್.ಧೋನಿ ತಮ್ಮ ರಕ್ತನಾಳದಲ್ಲಿ ʼಐಸ್ʼ ಹೊಂದಿದ್ದಾರೆ ಮತ್ತು ರೋಹಿತ್ ಶರ್ಮ ʼನ್ಯಾಚುರಲ್ ಲೀಡರ್ʼ ಆಗಿದ್ದಾರೆ ಎಂದು ಟೀಂ ಇಂಡಿಯಾದ ಆಟಗಾರರ ನಾಯಕತ್ವ ಗುಣವನ್ನ ತಮ್ಮದೇ ಶೈಲಿಯಲ್ಲಿ ಬಣ್ಣಿಸಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ನಾಯಕತ್ವದಲ್ಲಿ ನಂಬಲಾಗದ ಕೆಲಸಗಳನ್ನು ಮಾಡಿದ್ದು, ಆಟಗಾರರನ್ನು ಸಮರ್ಥವಾಗಿ ಮುನ್ನಡೆಸಲಿದ್ದಾರೆ. ಅಲ್ಲದೇ ತಮ್ಮ ಆಟದ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿರುವ ಅವರು, ತಾವಾಡುವ ಪ್ರತಿ ಪಂದ್ಯಕ್ಕೂ ಜೀವ ತುಂಬಲಿದ್ದಾರೆ. ಹೀಗಾಗಿ ಕೊಹ್ಲಿ ʼಸೂಪರ್ಹ್ಯೂಮನ್ʼ ಎಂಬು ನಾನು ಭಾವಿಸಲಿದ್ದು, ತಮ್ಮ ಜೊತೆಗಿರುವ ಆಟಗಾರರನ್ನು ಯಾವ ರೀತಿ ಮುನ್ನಡೆಸಬೇಕೆಂದು ವಿರಾಟ್ ತಿಳಿದಿದ್ದಾರೆ. ಮೈದಾನದ ಹೊರಗೂ ಸಹ ಸಮತೋಲನದಿಂದ ಕೂಡಿದ ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂದು ಐಸಿಸಿ ರಿವ್ಯೂನಲ್ಲಿ ಬಣ್ಣಿಸಿರುವ ವಾಟ್ಸನ್, ಆರ್ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಅವರೊಂದಿಗೆ ಆಡಿದ್ದು ಅದ್ಭುತ ಅನುಭವವಾಗಿದೆ ಎಂದಿದ್ದಾರೆ.
ಟೀಂ ಇಂಡಿಯಾದ ಕೂಲ್ ಕ್ಯಾಪ್ಟನ್ ಬಗ್ಗೆ ಮಾತನಾಡಿರುವ ಆಸೀಸ್ ಮಾಜಿ ಆಲ್ರೌಂಡರ್, ಧೋನಿ ಅವರು ತಮ್ಮ ರಕ್ತನಾಳದಲ್ಲಿ ಐಸ್ ಹೊಂದಿದ್ದು, ಒತ್ತಡದ ಸಂದರ್ಭದಲ್ಲೂ ತಂಡವನ್ನು ಉತ್ತಮವಾಗಿ ಮುನ್ನಡೆಸುವ ಸಾಮರ್ಥ್ಯ ಅವರಲ್ಲಿದೆ. ತಮ್ಮ ಆಟಗಾರರನ್ನು ಹೆಚ್ಚಾಗಿ ನಂಬುವ ಧೋನಿ, ಪ್ರತಿ ಆಟಗಾರರ ಸಾಮರ್ಥ್ಯದ ಬಗ್ಗೆ ನಂಬಿಕೆ ಹೊಂದಿದ್ದಾರೆ. ತಮ್ಮ ಆಟಗಾರರು ತಂಡಕ್ಕೆ ಅಗತ್ಯವಿರುವ ಪ್ರದರ್ಶನ ನೀಡುತ್ತಾರೆಂದು ಧೋನಿ ನಂಬಿಕೆ ಹೊಂದಿರುತ್ತಾರೆ ಎಂದು ಹೇಳಿದ್ದಾರೆ.
ಇನ್ನೂ ಭಾರತ ತಂಡದ ಹಾಲಿ ನಾಯಕ ರೋಹಿತ್ ಶರ್ಮ ನಾಯಕತ್ವದ ಬಗ್ಗೆ ಮಾತನಾಡಿರುವ ಶೇನ್ ವಾಟ್ಸನ್, ರೋಹಿತ್ ಸಹಜ ನಾಯಕತ್ವ ಗುಣವಿರುವ ಆಟಗಾರನಾಗಿದ್ದು, ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುವ ರೀತಿಯನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಅವರು ತಮ್ಮ ಕೆಲಸವನ್ನು ನಂಬಲು ಸಾಧ್ಯವಿಲ್ಲದಷ್ಟು ಚೆನ್ನಾಗಿ ನಿಭಾಯಿಸಲಿದ್ದು, ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುವ ಸಾಮರ್ಥ್ಯ ಮತ್ತು ಅನುಭವ ಹೊಂದಿದ್ದಾರೆ. ಅತ್ಯಂತ ಒತ್ತಡದ ಸಂದರ್ಭದಲ್ಲಿ ರೋಹಿತ್ ಶರ್ಮ ಮುಂಬೈ ತಂಡದ ನಾಯಕತ್ವವಹಿದ್ದು, ಐಪಿಎಲ್ನಲ್ಲಿ ಪ್ರತಿಬಾರಿಯೂ ಮುಂಬೈ ಇಂಡಿಯನ್ಸ್ ಬಗ್ಗೆ ಹೆಚ್ಚಿನ ನಿರೀಕ್ಷೆ ಇರಲಿದೆ ಎಂದ ಅವರು, ರೋಹಿತ್ ಅವರು ಬ್ಯಾಟಿಂಗ್ ನೋಡಲು ನಾನು ಇಷ್ಟಪಡುತ್ತೇನೆ ಎಂದಿದ್ದಾರೆ.
ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಶೇನ್ ವಾಟ್ಸನ್, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಮತ್ತು ಎಂ.ಎಸ್.ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಿದ್ದಾರೆ.