T20 ಕ್ರಿಕೆಟ್ನಲ್ಲಿ ಯಾವಾಗ ದಾಖಲೆಗಳಾಗುತ್ತವೆ..? ಯಾವಾಗ ದಾಖಲೆಗಳು ಮುರಿದು ಹೋಗುತ್ತವೆ ಅನ್ನುವ ಬಗ್ಗೆ ಗೊತ್ತೇ ಆಗುವುದಿಲ್ಲ. ಆದರೆ ದಾಖಲೆಗಳು ಮಾತ್ರ ನಿರಂತರವಾಗಿ ಆಗುತ್ತಲೇ ಇರುತ್ತದೆ. ಈ ಬಾರಿ ಪಾಕಿಸ್ತಾನ ಸೂಪರ್ ಲೀಗ್ನಲ್ಲೂ ಹೊಸ ವಿಶ್ವದಾಖಲೆಯಾಗಿದೆ.
PSLನಲ್ಲಿ ಶಾಹಿನ್ ಅಫ್ರಿಧಿ ನಾಯಕತ್ವದ ಲಾಹೋರ್ ಖಲಂದರ್ಸ್ ತಂಡ ಟ್ರೋಫಿ ಎತ್ತಿ ಹಿಡಿದಿದೆ. ಈ ಮೂಲಕ 21 ವರ್ಷದ ಶಹೀನ್ ಅಫ್ರಿದಿ ವಿಶ್ವದ ಪ್ರಮುಖ ಟಿ20 ಕ್ರಿಕೆಟ್ ಲೀಗ್ ಟೂರ್ನಮೆಂಟ್ನಲ್ಲಿ ಪ್ರಶಸ್ತಿ ಗೆದ್ದ ಯುವ ನಾಯಕ ಎಂಬ ಸಾಧನೆ ಮಾಡಿದ್ದಾರೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಸ್ಟೀವ್ ಸ್ಮಿತ್ ಅವರ ದೊಡ್ಡ ದಾಖಲೆಯನ್ನೇ ಹಿಂದಿಕ್ಕಿದ್ದಾರೆ.
2012 ರ ಬಿಗ್ಬ್ಯಾಷ್ನಲ್ಲಿ ಸಿಡ್ನಿ ಸಿಕ್ಸರ್ಸ್ ತಂಡದ ನಾಯಕನಾಗಿ ಸ್ಟೀವ್ ಸ್ಮಿತ್ 22 ವರ್ಷವಿದ್ದಾಗ ಪ್ರಶಸ್ತಿ ಗೆದ್ದಿದ್ದರು. ನಂತರ ರೋಹಿತ್ ಶರ್ಮಾ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ನಾಯಕನಾಗಿ 2013 ರಲ್ಲಿ 26 ವರ್ಷಕ್ಕೆ ಟ್ರೋಫಿ ಎತ್ತಿ ಹಿಡಿದ ಸಾಧನೆ ಗೈದಿದ್ದರು. ಆದರೆ ಈಗ ಶಾಹಿನ್ ಅಫ್ರಿಧಿ 21 ವರ್ಷಕ್ಕೆ ಈ ಸಾಧನೆ ಮಾಡಿದ್ದಾರೆ.
ಫೈನಲ್ ಪಂದ್ಯದಲ್ಲಿ ಮೊಹಮ್ಮದ್ ರಿಜ್ವಾನ್ ನಾಯಕತ್ವದ ಮುಲ್ತಾನ್ ಸುಲ್ತಾನ್ ವಿರುದ್ಧದ ಪಂದ್ಯದಲ್ಲಿ ಅಫ್ರಿದಿ ನಾಯಕತ್ವದ ಲಾಹೋರ್ ಖಲಂದರ್ಸ್ ತಂಡ 42 ರನ್ಗಳ ಭರ್ಜರಿ ಜಯ ಸಾಧಿಸಿ ಪಿಎಸ್ಎಲ್ 2022 ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.