ಯುವ ಬ್ಯಾಟ್ಸ್ಮನ್ ಶಾರುಖ್ ಖಾನ್ ಕೇವಲ ಆರು ರನ್ಗಳಿಂದ ದ್ವಿಶತಕವನ್ನು ತಪ್ಪಿಸಿಕೊಂಡರು. ಆದರೆ ಅವರ ಮತ್ತು ಬಾಬಾ ಇಂದರ್ಜಿತ್ ಅವರ ಶತಕಗಳ ನೆರವಿನಿಂದ ತಮಿಳುನಾಡು ಶನಿವಾರ ಇಲ್ಲಿ ದೆಹಲಿ ವಿರುದ್ಧದ ರಣಜಿ ಟ್ರೋಫಿ ಎಲೈಟ್ ಗ್ರೂಪ್ ಎಚ್ ಪಂದ್ಯದ ಮೂರನೇ ದಿನದಲ್ಲಿ ನಿರ್ಣಾಯಕ 42 ರನ್ಗಳ ಮುನ್ನಡೆ ಸಾಧಿಸಿತು.
ಶಾರುಖ್ 148 ಎಸೆತಗಳಲ್ಲಿ 20 ಬೌಂಡರಿ ಹಾಗೂ 10 ಸಿಕ್ಸರ್ಗಳ ನೆರವಿನಿಂದ 194 ರನ್ ಗಳಿಸಿದರೆ, ಇಂದರ್ಜಿತ್ 149 ಎಸೆತಗಳನ್ನು ಎದುರಿಸಿ 17 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 117 ರನ್ ಗಳಿಸಿದರು.
ಇವರಿಬ್ಬರು ಆರನೇ ವಿಕೆಟ್ಗೆ 134 ರನ್ಗಳ ಜೊತೆಯಾಟವನ್ನು ನೀಡಿದರು. ತಮಿಳುನಾಡು ತನ್ನ ಮೊದಲ ಇನ್ನಿಂಗ್ಸ್ನಲ್ಲಿ 494 ರನ್ ಗಳಿಸಿತು. ತಮಿಳುನಾಡಿನ ಇನಿಂಗ್ಸ್ ಅಂತ್ಯಗೊಳ್ಳುವುದರೊಂದಿಗೆ ದಿನದಾಟ ಕೊನೆಗೊಂಡಿತು. ದೆಹಲಿ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 452 ರನ್ ಗಳಿಸಿತ್ತು. ಶಾರುಖ್ ಆರಂಭದಿಂದಲೂ ಆಕ್ರಮಣಕಾರಿ ಆಟವನ್ನು ಆಡಿ ಅಬ್ಬರಿಸಿದರು. ಆರಂಭಿಕ ಆಘಾತದಿಂದ ತಂಡಕ್ಕೆ ಈ ಜೋಡಿ ಚೇತರಿಕೆ ನೀಡಿದರು. ಅವರು ತಮ್ಮ ಪ್ರಥಮ ದರ್ಜೆ ವೃತ್ತಿಜೀವನದ ಮೊದಲ ಶತಕವನ್ನು ಗಳಿಸಿದರು. ಇಂದರ್ಜಿತ್ ಔಟಾದ ನಂತರ ಅವರು 50 ರನ್ ಗಳಿಸಿದ ಎನ್ ಜಗದೀಸನ್ ಅವರಿಂದ ಉತ್ತಮ ಬೆಂಬಲವನ್ನು ಪಡೆದರು. ಡೆಲ್ಲಿ ಪರ ವಿಕಾಸ್ ಮಿಶ್ರಾ 108 ರನ್ ನೀಡಿ 6 ವಿಕೆಟ್ ಪಡೆದರು.