ಟೆನಿಸ್ ವಿಶ್ವದ ಜನಪ್ರಿಯ ಮತ್ತು ಶ್ರೀಮಂತ ಆಟ. ಫಾರ್ಮುಲಾ ವನ್ ಕೇವಲ ದುಡ್ಡಿದ್ದವರ ಆಟ. ಈ ಎರಡೂ ಕ್ರೀಡೆಗಳಲ್ಲಿ ಹಲವರು ಹೆಸರು ಮಾಡಿದ್ದಾರೆ. ಆದರೆ ಮಹಿಳಾ ಟೆನಿಸ್ ನಲ್ಲಿ ಸೆರೆನಾ ವಿಲಿಯಮ್ಸ್ ಅಂದರೆ ಚಾಂಪಿಯನ್ ಆಟಗಾರ್ತಿ. ಫಾರ್ಮುಲಾ ವನ್ ನಲ್ಲಿ ಲೂಯಿಸ್ ಹ್ಯಾಮಿಲ್ಟನ್ ಚಾಂಪಿಯನ್ ಆಟಗಾರ. ಇಬ್ಬರು ಚಾಂಪಿಯನ್ ಕ್ರೀಡಾಪಟುಗಳು ಈಗ ಚಾಂಪಿಯನ್ ಕ್ರೀಡಾ ತಂಡವನ್ನು ಖರೀದಿ ಮಾಡಲು ಮುಂದಾಗಿದ್ದಾರೆ ಅನ್ನುವ ಸುದ್ದಿ ಇದೆ.
ಸೆರೆನಾ ಮತ್ತು ಹ್ಯಾಮಿಲ್ಟನ್ ಇಂಗ್ಲೀಷ್ ಫುಟ್ಬಾಲ್ ಕ್ಲಬ್ ಚೆಲ್ಸಿ ತಂಡ ಮಾಲೀಕರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. 23 ಬಾರಿಯ ಗ್ರ್ಯಾನ್ ಸ್ಲಾಂ ಸಿಂಗಲ್ಸ್ ಪ್ರಶಸ್ತಿ ವಿಜೇತ ಟೆನಿಸ್ ತಾರೆ ಸೆರೆನಾ ಹಾಗೂ 7 ಬಾರಿ ಫಾರ್ಮುಲಾ 1 ವಿಶ್ವ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ ಚೆಲ್ಸಿ ತಂಡಕ್ಕೆ ಹಣ ಹಾಕುವುದು ಬಹುತೇಕ ಪಕ್ಕಾ ಆಗಿದೆ. ಲಿವರ್ಪೂಲ್ ಫುಟ್ಬಾಲ್ ಕ್ಲಬ್ ಮಾಜಿ ಮುಖ್ಯಸ್ಥ ಮಾರ್ಟಿನ್ ಬ್ರೌಟನ್ ಅವರ ಜೊತೆ ಸೇರಿ ಇವರಿಬ್ಬರು ತಂಡ ಖರೀದಿಗೆ ಆಸಕ್ತಿ ತೋರಿದ್ದು ಒಟ್ಟು 20 ಮಿಲಿಯನ್ ಪೌಂಡ್ ಅಂದರೆ 198.7 ಕೋಟಿ ರೂಪಾಯಿ ಹೂಡಿಕೆ ಮಾಡಲು ಸಿದ್ಧರಿದ್ದಾರೆ ಎನ್ನಲಾಗಿದೆ.
ಬ್ರೌಟನ್ ಅವನ್ನೊಳಗೊಂಡ ತಂಡದಲ್ಲಿ ವಿಶ್ವ ಅಥ್ಲೆಟಿಕ್ಸ್ ಫೆಡರೇಶನ್ ಅಧ್ಯಕ್ಷ ಸೆಬಾಸ್ಟಿಯನ್ ಕೋ ಸೇರಿದಂತೆ ಹಲವರಿದ್ದಾರೆ. ಸೆರೆನಾ ಈಗಾಗಲೇ ಲಾಸ್ ಏಂಜಲೀಸ್ನ ಮಹಿಳಾ ಫುಟ್ಬಾಲ್ ತಂಡದಲ್ಲಿ ಹೂಡಿಕೆ ಮಾಡಿದ್ದಾರೆ. ರಷ್ಯಾದ ರೋಮನ್ ಅಬ್ರಾಮೊವಿಚ್ ಸದ್ಯ ಚೆಲ್ಸಿ ತಂಡದ ಮಾಲೀಕತ್ವ ಹೊಂದಿದ್ದಾರೆ. ಆದರೆ ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ ಅವರು ತಂಡದ ಮಾಲೀಕತ್ವ ತೊರೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹೀಗಾಗ ಸೆರೆನಾ ಮತ್ತು ಲೂಯಿಸ್ ಹ್ಯಾಮಿಲ್ಟನ್ ತಂಡದ ಖರೀದಿಗೆ ಆಸಕ್ತಿ ತೋರಿದ್ದಾರೆ. ಸೆರೆನಾ ಮತ್ತು ಲೂಯಿಸ್ ಹೊಸ ಎಂಟ್ರಿಯಿಂದ ಚೆಲ್ಸಿ ತಂಡಕ್ಕೂ ಹೆಚ್ಚು ಆತ್ಮವಿಶ್ವಾಸ ಸಿಗಬಹುದು.