ಐಪಿಎಲ್ನಲ್ಲಿ ಸ್ಪೋಟಕ ಬ್ಯಾಟಿಂಗ್ನಿಂದಲೇ ಸದ್ದು ಮಾಡಿರುವ ಸಂಜೂ ಸ್ಯಾಮ್ಸನ್, ಮತ್ತೊಮ್ಮೆ ಭಾರತ ರಾಷ್ಟ್ರೀಯ ತಂಡಕ್ಕೆ ಸ್ಟ್ರಾಂಗ್ ಕಮ್ ಬ್ಯಾಕ್ ಮಾಡೋಕ್ಕೆ ಸಜ್ಜಾಗಿದ್ದಾರೆ.
ಚುಟುಕು ಕ್ರಿಕೆಟ್ನಲ್ಲಿ ಅಬ್ಬರದ ಬ್ಯಾಟಿಂಗ್ನಿಂದ ಗಮನ ಸೆಳೆಯುವ ಮೂಲಕ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಸಂಜು ಸ್ಯಾಮ್ಸನ್, 2015ರಲ್ಲಿ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ತಮ್ಮ ಚೊಚ್ಚಲ ಟಿ20 ಪಂದ್ಯವಾಡಿದ್ದರು. ಆದರೆ ಐಪಿಎಲ್ನಲ್ಲಿ ತೋರಿದ್ದ ಬ್ಯಾಟಿಂಗ್ ಸಾಮರ್ಥ್ಯವನ್ನು ತೋರುವಲ್ಲಿ ಎಡವಿದ ಸಂಜು, ಸ್ಥಿರ ಪ್ರದರ್ಶನದ ಕೊರತೆಯಿಂದಾಗಿ ತಂಡದಿಂದ ಸ್ಥಾನ ಕಳೆದುಕೊಂಡರು.
ಹೀಗಾಗಿ ಆಗೊಮ್ಮೆ-ಈಗೊಮ್ಮೆ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದ ಸಂಜು ಸ್ಯಾಮ್ಸನ್, ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವೈಫಲ್ಯ ಅನುಭವಿಸಿದ್ದರು. ಪರಿಣಾಮ 7 ವರ್ಷದ ಹಿಂದೆಯೇ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಸಂಜು, ತಂಡದ ಕಾಯಂ ಆಟಗಾರನಾಗಿ ಛಾಪು ಮೂಡಿಸಲಾಗದೆ ನಿರಾಸೆ ಅನುಭವಿಸಿದ್ದರು. ಹೀಗಾಗಿ ಈವರೆಗೂ 12 ಟಿ20 ಪಂದ್ಯವನ್ನು ಆಡಿರುವ ಸಂಜು, ಒಂದೂ ಅರ್ಧಶತಕವನ್ನು ಗಳಿಸದೆ ಕೇವಲ 117 ರನ್ಗಳನ್ನಷ್ಟೇ ಕಲೆಹಾಕಿದ್ದರು.
ಆದರೆ ಇದೀಗ ಮತ್ತೊಮ್ಮೆ ತಂಡದಲ್ಲಿ ಸ್ಥಾನ ಪಡೆದಿರುವ ಸಂಜು ಸ್ಯಾಮ್ಸನ್, ಬಲಿಷ್ಠ ಕಮ್ ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 25 ಬಾಲ್ಗಳಲ್ಲಿ 3 ಸಿಕ್ಸರ್, 2 ಬೌಂಡರಿ ನೆರವಿನಿಂದ 39 ರನ್ಗಳಿಸಿದ ಸಂಜು ಸ್ಯಾಮ್ಸನ್, ಭಾರತದ ಗೆಲುವಿನಲ್ಲಿ ಕೈಜೋಡಿಸಿದರು. ಆ ಮೂಲಕ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುವಲ್ಲಿ ಸಂಜು, ಸ್ವಲ್ಪಮಟ್ಟಿನ ಯಶಸ್ಸು ಕಂಡಿದ್ದಾರೆ. ಆದರೆ ಟಿ20 ಕ್ರಿಕೆಟ್ನಲ್ಲಿ ಸ್ಪೋಟಕ ಆಟವಾಡುವ ಸಾಮರ್ಥ್ಯ ಹೊಂದಿರುವ ಸಂಜು ಬ್ಯಾಟ್ನಿಂದ ಇನ್ನಷ್ಟು ಶ್ರೇಷ್ಠ ಪ್ರದರ್ಶನ ನೀಡಲೇಬೇಕಿದೆ.
ತಮ್ಮ ಬ್ಯಾಟಿಂಗ್ ಬಗ್ಗೆ ಪಂದ್ಯದ ಬಳಿಕ ಮಾತನಾಡಿರುವ ಸಂಜು, ಬಹಳ ದಿನಗಳ ಬಳಿಕ ಟೀಂ ಇಂಡಿಯಾ ಪರ ಆಡಿದ್ದು, ಬ್ಯಾಟಿಂಗ್ ಲಯ ಕಂಡುಕೊಳ್ಳಲು ಹೆಚ್ಚಿನ ಸಮಯವನ್ನು ತೆಗೆದುಕೊಂಡೆ. ಒಂದು ಬೌಂಡರಿ ಬಾರಿಸಿದ ಬಳಿಕ ನನ್ನ ಬ್ಯಾಟಿಂಗ್ ಲಯ ಪಡೆದುಕೊಂಡೆ ಎಂದು ಭಾವಿಸಿದೆ. ನನ್ನ ಇಂದಿನ ಪ್ರದರ್ಶನದ ಬಗ್ಗೆ ಖುಷಿ ಇದೆ ಎಂದಿದ್ದಾರೆ.