ಕಿವೀಸ್ ಬೌಲರ್ಗಳ ಆಕ್ರಮಣಕಾರಿ ಬೌಲಿಂಗ್ ದಾಳಿಗೆ ಉತ್ತರ ನೀಡಲಾಗದೆ ಶರಣಾದ ಸೌತ್ ಆಫ್ರಿಕಾ, ಮೊದಲ ಟೆಸ್ಟ್ನಲ್ಲಿ ಇನ್ನಿಂಗ್ಸ್ ಹಾಗೂ 276 ರನ್ಗಳ ಹೀನಾಯ ಸೋಲು ಕಂಡಿದೆ. ಇದರೊಂದಿಗೆ ಅತಿಥೇಯ ನ್ಯೂಜಿ಼ಲೆಂಡ್ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಪಂದ್ಯದ ಆರಂಭದಿಂದಲೇ ಪ್ರಾಬಲ್ಯ ಮೆರೆದ ಕಿವೀಸ್ ಬೌಲರ್ಗಳು, ಮೂರನೇ ದಿನವೂ ಅದ್ಭುತ ಪ್ರದರ್ಶನ ನೀಡಿದರು. ನ್ಯೂಜಿ಼ಲೆಂಡ್ ತಂಡದ ಬೌಲರ್ಗಳ ದಾಳಿಯನ್ನು ಎದುರಿಸಲಾಗದೆ ಪರದಾಡಿದ ಸೌತ್ ಆಫ್ರಿಕಾ ದ್ವಿತೀಯ ಇನ್ನಿಂಗ್ಸ್ನಲ್ಲಿ 111 ರನ್ಗಳಿಗೆ ಸರ್ವಪತನ ಕಂಡಿತು. ಆ ಮೂಲಕ ಇನ್ನಿಂಗ್ಸ್ ಹಾಗೂ 276 ರನ್ಗಳ ಭಾರೀ ಅಂತರದ ಸೋಲನುಭವಿಸಿತು. ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದ ಟಿಮ್ ಸೌತಿ 5 ವಿಕೆಟ್ ಪಡೆದು, ಕಿವೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
2ನೇ ದಿನದಂತ್ಯಕ್ಕೆ 34 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಸೌತ್ ಆಫ್ರಿಕಾ 3ನೇ ದಿನವೂ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ದಿನದಾಟದ ಆರಂಭದಲ್ಲೇ ದುಸೇನ್(9) ವಿಕೆಟ್ ಕಳೆದುಕೊಂಡ ಸೌತ್ ಆಫ್ರಿಕಾ, 12 ರನ್ಗಳ ಅಂತರದಲ್ಲಿ ಹಂಝಾ(6) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಜೊತೆಯಾದ ತೆಂಬಾ ಬವುಮಾ(41) ಹಾಗೂ ಕೈಲ್ ವೆರ್ರೆನ್ನೆ(30) 6ನೇ ವಿಕೆಟ್ಗೆ 41 ರನ್ಗಳ ಜೊತೆಯಾಟವಾಡಿದ ಸ್ವಲ್ಪಮಟ್ಟಿನ ಚೇತರಿಕೆ ನೀಡಿದರು.
ಆದರೆ ಒಂದು ಓವರ್ ಅಂತರದಲ್ಲಿ ಈ ಇಬ್ಬರು ಆಟಗಾರರು ತಮ್ಮ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಇದಾದ ನಂತರ ಕಣಕ್ಕಿಳಿದ ಕೆಳ ಕ್ರಮಾಂಕದ ಆಟಗಾರರು ಸಹ ಹೆಚ್ಚು ಹೊತ್ತು ಕಣದಲ್ಲಿ ಉಳಿಯಲಿಲ್ಲ. ಪರಿಣಾಮ ಸೌತ್ ಆಫ್ರಿಕಾ 111 ರನ್ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.
ಸೌತಿ ಮಾರಕ ಬೌಲಿಂಗ್ : ನ್ಯೂಜಿ಼ಲೆಂಡ್ ಅನುಭವಿ ವೇಗದ ಬೌಲರ್ ಟಿಮ್ ಸೌತಿ, ಮಾರಕ ಬೌಲಿಂಗ್ನಿಂದ ಸೌತ್ ಆಫ್ರಿಕಾ ಆಟಗಾರರನ್ನ ಕಟ್ಟಿಹಾಕಿದರು. ಮೊದಲ ಇನ್ನಿಂಗ್ಸ್ನಲ್ಲಿ ಹೆಚ್ಚಿನ ಸದ್ದು ಮಾಡದ ಸೌತಿ, ದ್ವಿತೀಯ ಇನ್ನಿಂಗ್ಸ್ ಆರಂಭದಿಂದಲೇ ಬೌಲಿಂಗ್ನಲ್ಲಿ ಮಿಂಚಿದರು. 17.4 ಓವರ್ಗಳಲ್ಲಿ ಕೇವಲ 35 ರನ್ ನೀಡಿ 5 ವಿಕೆಟ್ ಕಬಳಿಸಿ, ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. ಇವರಿಗೆ ಉತ್ತಮ ಸಾಥ್ ನೀಡಿದ ಮ್ಯಾಟ್ ಹೆನ್ರಿ ಹಾಗೂ ವ್ಯಾಗ್ನರ್ ತಲಾ 2 ವಿಕೆಟ್ ಪಡೆದರೆ, ಜಾನ್ಸನ್ 1 ವಿಕೆಟ್ ಪಡೆದರು. ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 7 ವಿಕೆಟ್ ಪಡೆದು ಮಿಂಚಿದ್ದ ಮ್ಯಾಟ್ ಹೆನ್ರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಉಭಯ ತಂಡಗಳ ನಡುವಿನ 2ನೇ ಟೆಸ್ಟ್ ಪಂದ್ಯ, ಫೆ.25ರಿಂದ ನಡೆಯಲಿದೆ.