ಏಪ್ರಿಲ್ 16 ರಂದು ನಡೆದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ (LSG) ಮುಂಬೈ ಇಂಡಿಯನ್ಸ್ (MI) ಅನ್ನು ಸೋಲಿಸಿತು. ಕೆಎಲ್ ರಾಹುಲ್ ನೇತೃತ್ವದ ತಂಡ ಲಖನೌ ಈ ಋತುವಿನಲ್ಲಿ 4 ಗೆಲುವು ಸಾಧಿಸಿದೆ. ಅಮೋಘ ಶತಕ ಸಿಡಿಸಿದ ಕೆಎಲ್ ರಾಹುಲ್ ಗೆಲುವಿನ ಹೀರೋ ಆದರು. ಆದರೆ ಅವರ ಖುಷಿಗೆ ಬ್ರೇಕ್ ಬಿದ್ದಿದೆ.
IPLT20.com ನ ವೆಬ್ಸೈಟ್ನಲ್ಲಿ ಲಖನೌ ಸೂಪರ್ ಜೈಂಟ್ಸ್ ಸ್ಲೋ ಓವರ್ ರೇಟ್ ಅಡಿಯಲ್ಲಿ ದಂಡ ವಿಧಿಸಲಾಗಿದೆ ಎಂದು ತಿಳಿಸಲಾಗಿದೆ. ಬ್ರಬೋರ್ನ್ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಈ ಪಂದ್ಯದಲ್ಲಿ, ಲಖನೌ ತಂಡವು ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವ ಮೂಲಕ 20 ಓವರ್ಗಳನ್ನು ಪೂರ್ಣಗೊಳಿಸಿತು.
ಇದೇ ಮೊದಲ ಬಾರಿಗೆ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕನಿಗೆ ನಿಯಮಾನುಸಾರ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಈ ಐಪಿಎಲ್ನಲ್ಲಿ ಕೆಎಲ್ ರಾಹುಲ್ಗಿಂತ ಮೊದಲು ರೋಹಿತ್ ಶರ್ಮಾ ಸಹ ದಂಡನೆಗೆ ಒಳಗಾಗಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಮೊದಲು ಬ್ಯಾಟಿಂಗ್ ಮಾಡಿ 199 ರನ್ ಗಳಿಸಿತು. ನಾಯಕ ಕೆಎಲ್ ರಾಹುಲ್ ಶತಕ ಹಾಗೂ 103 ರನ್ ಗಳಿಸಿದ್ದರು. ಕೆಎಲ್ ರಾಹುಲ್ ಅವರ ಇನ್ನಿಂಗ್ಸ್ನಲ್ಲಿ ಒಂಬತ್ತು ಬೌಂಡರಿ ಮತ್ತು ಐದು ಸಿಕ್ಸರ್ ಸೇರಿದ್ದವು. ಮುಂಬೈ ಇಂಡಿಯನ್ಸ್ ಕೇವಲ 181 ರನ್ ಗಳಿಸಿ, ಈ ಋತುವಿನಲ್ಲಿ ಸತತ ಆರನೇ ಸೋಲು ಕಂಡಿದೆ. ಮುಂಬೈ ಐಪಿಎಲ್ 2022 ರಲ್ಲಿ ಇದುವರೆಗೆ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ, ಆದ್ದರಿಂದ ತಂಡದ ಖಾತೆಯು ಸಹ ತೆರೆದಿಲ್ಲ ಮತ್ತು ಪ್ಲೇಆಫ್ ತಲುಪುವುದು ಕಷ್ಟಕರವಾಗಿದೆ.