ಆರ್ ಸಿಬಿ ತಂಡ ಬಿಸಿಬೇಳೆ ಬಾತ್ನಷ್ಟೇ ಹಾಟ್ ಅಂಡ್ ಟೇಸ್ಟಿ. ಸನ್ ರೈಸರ್ಸ್ ತಂಡ ಚಿತ್ರಾನ್ನದ ಹಾಗೆ ಸೈಲೆಂಟ್ ಆಗಿ ಹೊಟ್ಟೆ ತುಂಬಿಸುತ್ತಿದೆ. ಹೀಗಾಗಿ ರನ್ ಸ್ವರ್ಗ ಬ್ರೆಬೋರ್ನ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದ್ರಾಬಾದ್ ನಡುವಿನ ಫೈಟ್ ಕುತೂಹಲ ಕೆರಳಿಸಿದೆ.
ಆರ್ಸಿಬಿ 7 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿದೆ. ಸನ್ರೈಸರ್ಸ್ 6 ಪಂದ್ಯಗಳಲ್ಲಿ ಗೆದ್ದಿರುವುದು 4. ಎರಡೂ ತಂಡಗಳು ಎರಡೆರಡು ಪಂದ್ಯ ಸೋತಿವೆ. ಆದರೆ ಸನ್ ರೈಸರ್ಸ್ ಒಂದು ಪಂದ್ಯ ಕಡಿಮೆ ಆಡಿದೆ. ಹೀಗಾಗಿ ಈ ಪಂದ್ಯದ ಕುತೂಹಲ ಸಿಕ್ಕಾಪಟ್ಟೆ ಹೆಚ್ಚಿದೆ.
ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಫಾಫ್ ಡು ಪ್ಲೆಸಿಸ್ ಜೋಡಿಯನ್ನು KGF ಎಂದು ಕರೆಯಲಾಗುತ್ತಿದೆ. ಆದರೆ ಈ ಪೈಕಿ K ಮುಗ್ಗರಿಸಿದೆ. G ಗ್ಯಾರೆಂಟಿ ಇಲ್ಲ. F ಫೆಂಟಾಸ್ಟಿಕ್ ಆಗಿದೆ. ಈ ಅಸ್ಥಿರ ಪ್ರದರ್ಶನದ ಜೊತೆ ಓಪನರ್ ಅನೂಜ್ ರಾವತ್ ಕೂಡ ಸಮಸ್ಯೆ ತಂದು ಹಾಕಿದ್ದಾರೆ.
ಮ್ಯಾಕ್ಸ್ ವೆಲ್ ಸ್ಟ್ರೈಕ್ ರೇಟ್ 193ರಷ್ಟಿದ್ದರೂ ಸ್ಥಿರ ಆಟವಿಲ್ಲ. ಮ್ಯಾಕ್ಸಿ 4 ಪಂದ್ಯಗಳಲ್ಲಿ 55 ಎಸೆತಗಳಲ್ಲಿ 113 ರನ್ ಗಳಿಸಿದರೂ ಅದು ಸಾಕಾಗುವುದಿಲ್ಲ. ವಿರಾಟ್ 7 ಇನ್ನಿಂಗ್ಸ್ ಗಳಲ್ಲಿ ಕೇವಲ 119 ರನ್ ಗಳಿಸಿದ್ದಾರೆ. ಇದು ಚಿಂತೆಯನ್ನು ಹೆಚ್ಚಿಸಿದೆ. ಹೀಗಾಗಿ ರನ್ ಗಳಿಸದ ಅನೂಜ್ ರಾವತ್ ಜಾಗದಲ್ಲಿ ವಿರಾಟ್ ರನ್ನು ಓಪನರ್ ಆಗಿ ಕಣಕ್ಕಿಳಿಸುವ ಲೆಕ್ಕಾಚಾರವಿದೆ. ದಿನೇಶ್ ಕಾರ್ತಿಕ್ ಮತ್ತು ಶಹಬಾಸ್ ಅಹ್ಮದ್ ಆರ್ ಸಿಬಿಯ ಸೆನ್ಸೇಷನಲ್ ಫರ್ಫಾಮೆನ್ಸ್ ಗೆ ಕಾರಣವಾಗಿದ್ದಾರೆ. ನಾಯಕ ಫಾಪ್ ಕಟ್ಟುವ ಇನ್ನಿಂಗ್ಸ್ ತಂಡಕ್ಕೆ ದೊಡ್ಡ ಮೊತ್ತಕ್ಕೆ ಅಡಿಪಾಯ ಹಾಕುತ್ತಿದೆ. ಬೌಲಿಂಗ್ನಲ್ಲಿ ಹ್ಯಾಜಲ್ ವುಡ್ ಹೊಸ ಜೋಶ್ ತಂದಿದ್ದಾರೆ. ಸಿರಾಜ್ ದುಬಾರಿ ಆದರೂ ಬೇಕೇ ಬೇಕು. ಹರ್ಷಲ್ ಪಟೇಲ್ ಸೂಪರ್. ವನಿಂದು ಹಸರಂಗ ವಿಕೆಟ್ ಟೇಕರ್. 5ನೇ ಬೌಲರ್ ಸ್ಥಾನವನ್ನು ಶಹಬಾಸ್ ಮತ್ತು ಮ್ಯಾಕ್ಸ್ ವೆಲ್ ತುಂಬಬೇಕು.
ಸನ್ ರೈಸರ್ಸ್ ತಂಡದ ಲೆಕ್ಕವೇ ಬೇರೆ. ಸದ್ದಿಲ್ಲ, ಗದ್ದಲವಿಲ್ಲ. ಆದರೆ ಫರ್ಫಾಮೆನ್ಸ್ ಮಾತ್ರ ಸೂಪರ್. ಮೊದಲ ಎರಡು ಪಂದ್ಯವನ್ನು ಸೋತರೂ ನಂತರ ಸತತ 4 ಪಂದ್ಯವನ್ನು ಗೆದ್ದಿದೆ. ಅಭಿಷೇಕ್ ಶರ್ಮಾ ಬೌಲರ್ ಗಳನ್ನು ಶೇಕ್ ಮಾಡಿದ್ದಾರೆ. ಕೇನ್ ವಿಲಿಯಮ್ಸನ್ ಕೂಲ್ ಅಂಡ್ ಕಾಮ್. ರಾಹುಲ್ ತ್ರಿಪಾಠಿ ಮತ್ತು ಏಡಿಯನ್ ಮಾರ್ಕ್ ರಾಂ ಅಬ್ಬರಿಸುವುದು ಗೊತ್ತೇ ಆಗುವುದಿಲ್ಲ. ನಿಕೋಲಸ್ ಪೂರನ್ ಸೆಟ್ ಆದ್ರೆ ಬೌಲರ್ ಗಳು ಉಡೀಸ್. ಶಶಾಂಕ್ ಸಿಂಗ್ ಮತ್ತು ಮಾರ್ಕೋ ಜನ್ಸೆನ್ ಬಿಗ್ ಹಿಟ್ ಮಾಡಬಲ್ಲರು. ವಾಷಿಂಗ್ಟನ್ ಸುಂದರ್ ಫಿಟ್ ಆಗಿರುವುದು ಬ್ಯಾಟಿಂಗ್ ಮತ್ತು ಬೌಲಿಂಗ್ಗೆ ಬಲ ನೀಡಿದೆ. ಭುವನೇಶ್ವರ್ ಕುಮಾರ್ ಆರಂಭ ಮತ್ತು ಅಂತ್ಯವನ್ನು ಚೆನ್ನಾಗಿ ಮಾಡುತ್ತಾರೆ. ಉಮ್ರನ್ ಮಲಿಕ್ ಮತ್ತು ಟಿ ನಟರಾಜ್ ಬಗ್ಗೆ ಹೆಚ್ಚು ಮಾತಿಲ್ಲ. ಒಟ್ಟಿನಲ್ಲಿ ಸನ್ ರೈಸರ್ಸ್ ಫರ್ಫೆಕ್ಟ್ ಬ್ಯಾಲೆನ್ಸ್ ಹೊಂದಿದೆ.
ರನ್ ಸ್ವರ್ಗ ಬ್ರೆಬೋರ್ನ್ ನಲ್ಲಿ ಈ ಪಂದ್ಯ ನಡೆಯುತ್ತಿರುವುದರಿಂದ ಸ್ಕೋರ್ ಕಾರ್ಡ್ ಮೇಲೆ ಕಣ್ಣಿದೆ. ಬೌಲರ್ ಗಳು ವಿಕೆಟ್ ಲೆಕ್ಕಹಾಕುವ ಬದಲು ರನ್ ಕಂಟ್ರೋಲ್ ಮಾಡುವುದನ್ನೇ ಯೋಚನೆ ಮಾಡುತ್ತಿರುತ್ತಾರೆ.