ಮುಂಬರುವ 2022ರ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾದಲ್ಲಿ ಪೈಪೋಟಿ ಏರ್ಪಟ್ಟಿದ್ದು, ಹಲವು ಆಟಗಾರರು ತಂಡದಲ್ಲಿ ಸ್ಥಾನ ಪಡೆಯಲು ಸತತ ಪ್ರಯತ್ನ ನಡೆಸುತ್ತಿದ್ದಾರೆ. ಇದಕ್ಕೆ ಪರೋಕ್ಷವಾಗಿ ಸುಳಿವು ನೀಡಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ, ತಂಡದಲ್ಲಿ ಆಡಲು ದೊರೆಯುವ ಅವಕಾಶವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವುದು ಆಟಗಾರರಿಗೆ ಬಿಟ್ಟಿದ್ದು ಎಂದಿದ್ದಾರೆ.
ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದ ಬಳಿಕ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ವೇಳೆ ಮಾತನಾಡಿದ ಅವರು, ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಸಾಕಷ್ಟು ಪ್ರತಿಭಾನ್ವಿತರನ್ನು ಹೊಂದಿದ್ದು, ನಾವು ಅವರಿಗೆ ಅವಕಾಶಗಳನ್ನು ನೀಡುತ್ತೇವೆ. ಆದರೆ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಅವರಿಗೆ ಬಿಟ್ಟಿದ್ದು ಎನ್ನುವ ಮೂಲಕ ಟಿ20 ವಿಶ್ವಕಪ್‌ಗೆ ತಂಡದಲ್ಲಿ ಸ್ಥಾನ ಪಡೆಯುವ ಪ್ರಯತ್ನದಲ್ಲಿರುವ ಆಟಗಾರರಿಗೆ ಸಿಗುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವಂತೆ ಸುಳಿವು ನೀಡಿದ್ದಾರೆ.
ಸಂಜೂ ಸ್ಯಾಮ್ಸನ್ ಪ್ರದರ್ಶನದ ಬಗ್ಗೆ ಮಾತನಾಡಿದ ರೋಹಿತ್ ಶರ್ಮ, ಇಂದಿನ ಪ್ರದರ್ಶನದೊಂದಿಗೆ ತಾನು ಎಷ್ಟು ಚೆನ್ನಾಗಿ ಆಡಬಲ್ಲೆ ಎಂಬುದನ್ನ ಸಂಜೂ ಸ್ಯಾಮ್ಸನ್ ತೋರಿಸಿದ್ದಾರೆಂದು ನಾನು ಭಾವಿಸಿದ್ದೇನೆ. ಅವರ ಇಂದಿನ ಪ್ರದರ್ಶನ ಸಿಕ್ಕ ಅವಕಾಶವನ್ನು ಹೇಗೆ ಬಳಸಿಕೊಳ್ಳಬೇಕೆಂಬುದನ್ನು ತೋರಿಸಿದೆ. ಸಾಕಷ್ಟು ಪ್ರತಿಭಾವಂತ ಆಟಗಾರರಿಗೆ ಅವರ ಸಾಮರ್ಥ್ಯ ಸಾಬೀತುಪಡಿಸಲು ಅವಕಾಶ ಬೇಕಿದೆ. ಇದಕ್ಕಾಗಿ ಅನೇಕ ಆಟಗಾರರು ಕಾಯುತ್ತಿದ್ದು, ಅವರ ಟೈಮ್ ಕೂಡ ಬರಲಿದೆ. ಹಲವು ಆಟಗಾರರಲ್ಲಿ ಟ್ಯಾಲೆಂಟ್ ಇರುವುದನ್ನು ನಾವು ಗಮನಿಸಿದ್ದು, ನಮ್ಮ ಕಡೆಯಿಂದ ಅವರಿಗೆ ಅವಕಾಶ ಮತ್ತು ಬೆಂಬಲ ನೀಡಬೇಕಿದೆ ಎಂದಿದ್ದಾರೆ.
ಲಯ ಕಂಡುಕೊಂಡ ಸ್ಯಾಮ್ಸನ್
ಐಪಿಎಲ್‌ನಲ್ಲಿ ಅದ್ಭುತ ಬ್ಯಾಟಿಂಗ್‌ನಿಂದ ಮಿಂಚಿದ್ದರೂ, ಭಾರತ ತಂಡದಲ್ಲಿ ನಿರೀಕ್ಷಿತ ಸಕ್ಸಸ್ ಕಾಣುವಲ್ಲಿ ವಿಫಲವಾಗಿದ್ದ ಸಂಜೂ ಸ್ಯಾಮ್ಸನ್, ಕಡೆಗೂ ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಏಳು ತಿಂಗಳ ನಂತರ ಭಾರತದ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡ ಸಂಜೂ ಸಾಮ್ಸನ್, ಬ್ಯಾಟಿಂಗ್‌ನಲ್ಲಿ ಸದ್ದು ಮಾಡಿದ್ದಾರೆ. ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 26 ಬಾಲ್‌ಗಳಲ್ಲಿ 3 ಸಿಕ್ಸರ್‌ಗಳೊಂದಿಗೆ 39 ರನ್‌ಗಳಿಸುವ ಮೂಲಕ ತಂಡದ ಗೆಲುವಿಗೆ ಉಪಯುಕ್ತ ಕಾಣಿಕೆ ನೀಡಿದ್ದರು. ಅಲ್ಲದೇ ಶ್ರೇಯಸ್ ಅಯ್ಯರ್ ಜೊತೆಗೂಡಿ 47 ಬಾಲ್‌ಗಳಲ್ಲಿ 84 ರನ್‌ಗಳ ಜೊತೆಯಾಟದ ಕಾಣಿಕೆಯನ್ನು ನೀಡಿದ್ದರು.