ರೋಹಿತ್ ಶರ್ಮಾ ಟೀಮ್ ಇಂಡಿಯಾದ ನಾಯಕತ್ವವಹಿಸಿಕೊಂಡ ಮೇಲೆ ಸೋಲೇ ಇಲ್ಲದ ತಂಡವಾಗಿ ಮೆರೆದಾಡುತ್ತಿದೆ. ಟಿ20ಯಲ್ಲಿ ನಂಬರ್ ವನ್ ತಂಡವಾಗಿಸಿದ ಹಿರಿಮೆ ರೋಹಿತ್ ಶರ್ಮಾ ಪಾಲಿನದ್ದಾಗಿದೆ. ರೋಹಿತ್ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ, ವೆಸ್ಟ್ಇಂಡೀಸ್ ವಿರುದ್ಧದ ಏಕದಿನ ಸರಣಿ ಹಾಗೂಟಿ20 ಸರಣಿ ಗೆಲುವಿನ ಹಿಂದೆ ರೋಹಿತ್ ನಾಯಕತ್ವದ ಕೈ ಚಳಕವಿದೆ.
ಇದೆಲ್ಲದರ ಮಧ್ಯೆ ಟೀಮ್ಇಂಡಿಯಾದ ನಾಯಕ ರೋಹಿತ್ ಶರ್ಮಾ ಹೊಸ ವಿಶ್ವದಾಖಲೆಯ ಹೊಸ್ತಿಲಲ್ಲಿದ್ದಾರೆ. ಲಂಕಾ ವಿರುದ್ಧದ ಟಿ20 ಸರಣಿ ಮುಗಿಯುವ ಹೊತ್ತಿಗೆ ರೋಹಿತ್ ಟಿ20 ಕ್ರಿಕೆಟ್ನ ಹೊಸ ಎರಡು ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಳ್ಳಲಿದ್ದಾರೆ.
ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ರೋಹಿತ್ ಶರ್ಮ ಪಾಕಿಸ್ತಾನದ ಶೋಯೆಬ್ ಮಲಿಕ್ ಹೆಸರಿನಲ್ಲಿರುವ ದಾಖಲೆ ಮುರಿಯಲಿದ್ದಾರೆ. ರೋಹಿತ್ ಪ್ರಸ್ತುತ 122 ಪಂದ್ಯಗಳಲ್ಲಿ ಆಡಿದ್ದಾರೆ. ಪಾಕಿಸ್ತಾನದ ಶೋಯೆಬ್ ಮಲಿಕ್ 124 ಟಿ20 ಪಂದ್ಯಗಳನ್ನು ಆಡಿ ವಿಶ್ವ ದಾಖಲೆ ಬರೆದಿದ್ದಾರೆ. ಲಂಕಾ ವಿರುದ್ಧ 3 ಪಂದ್ಯಗಳನ್ನು ರೋಹಿತ್ ಆಡಿದರೆ ಹೊಸ ವಿಶ್ವ ದಾಖಲೆ ಅವರ ಹೆಸರಿಗಾಗಲಿದೆ.
ವಿಶ್ವದಲ್ಲೇ 100ಕ್ಕಿಂತ ಹೆಚ್ಚು ಟಿ-20ಗಳನ್ನು ಆಡಿದ 9 ಆಟಗಾರರಲ್ಲಿ ರೋಹಿತ್ 2ನೇ ಸ್ಥಾನದಲ್ಲಿದ್ದಾರೆ. ಈಗಾಗಲೇ ರೋಹಿತ್ ಶರ್ಮ ಭಾರತದ ಪರ ಅತೀ ಹೆಚ್ಚು ಟಿ-20 ಆಡಿದ ಆಟಗಾರ ಎನಿಸಿಕೊಂಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ 98 ಮತ್ತು ವಿರಾಟ್ ಕೊಹ್ಲಿ 97 ಪಂದ್ಯಗಳನ್ನು ಆಡಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.
ಇದೇ ವೇಳೆ ರೋಹಿತ್ ಶರ್ಮ 37 ರನ್ ಗಳಿಸಿದರೆ ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಮತ್ತೊಂದು ದಾಖಲೆ ಬರೆಯಲಿದ್ದಾರೆ. ಪ್ರಸ್ತುತ ನ್ಯೂಜಿಲೆಂಡ್ನ ಮಾರ್ಟಿನ್ ಗುಪ್ಟಿಲ್ 112 ಪಂದ್ಯಗಳಿಂದ 3299 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, 97 ಪಂದ್ಯಗಳಿಂದ 3296 ರನ್ ಬಾರಿಸಿರುವ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮ 122 ಪಂದ್ಯಗಳಿಂದ 4 ಶತಕ ಸೇರಿದಂತೆ 3263 ರನ್ ಸಿಡಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಲಂಕಾ ವಿರುದ್ಧದ ಸರಣಿಯಲ್ಲಿ ಇದು ಕೂಡ ಸಾಧ್ಯವಾಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಲಂಕಾ ವಿರುದ್ಧದ ಸರಣಿ ರೋಹಿತ್ಗೆ ಹೊಸ ಮುಕುಟ ತೊಡಿಸಲಿದೆ.