ಟೀಂ ಇಂಡಿಯಾದ ಬ್ಯಾಟಿಂಗ್ ಅಸ್ತ್ರವಾಗಿ ಹಲವು ದಾಖಲೆಗಳನ್ನು ಬರೆದಿರುವ ಹಿಟ್ ಮ್ಯಾನ್ ರೋಹಿತ್ ಶರ್ಮ, ನಾಯಕನಾಗಿಯೂ ಅದ್ಭುತ ಯಶಸ್ಸು ಸಾಧಿಸುತ್ತಿದ್ದಾರೆ.
ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಟೀಂ ಇಂಡಿಯಾದ ಏಕದಿನ, ಟಿ20 ಹಾಗೂ ಟೆಸ್ಟ್ ತಂಡದ ನಾಯಕನಾಗಿ ರೋಹಿತ್ ಶರ್ಮ ಅವರನ್ನ ನೇಮಕ ಮಾಡಲಾಯಿತು. ಆಯ್ಕೆದಾರರ ನಿರೀಕ್ಷೆಯಂತೆ ಹಿಟ್ ಮ್ಯಾನ್, ಟಿ20 ಕ್ರಿಕೆಟ್‌ನಲ್ಲಿ ತಂಡದ ನಾಯಕತ್ವದಲ್ಲೂ ದೊಡ್ಡ ಸಕ್ಸಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆಯೂ ಹಂಗಾಮಿ ಕ್ಯಾಪ್ಟನ್ ಆಗಿ ಯಶಸ್ಸು ಕಂಡಿದ್ದ ರೋಹಿತ್, ಫುಲ್ ಟೈಮ್ ನಾಯಕರಾಗಿಯೂ ಯಶಸ್ಸು ಸಾಧಿಸಿದ್ದಾರೆ.
ನಾಯಕತ್ವದ ಜವಾಬ್ದಾರಿ ಹೊತ್ತ ಬಳಿಕ ಇತ್ತೀಚೆಗೆ ತವರಿನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ರೋಹಿತ್ ಶರ್ಮ ನಾಯಕತ್ವದಲ್ಲಿ ಭಾರತ 3-0 ಅಂತರದಲ್ಲಿ ಸರಣಿ ಗೆಲುವು ಸಾಧಿಸಿತ್ತು. ಇದೀಗ ಪ್ರಸ್ತುತ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಗೆಲುವಿನ ಸಕ್ಸಸ್ ಮುಂದುವರಿಸಿದ್ದಾರೆ. ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಸರಣಿ ವಶಪಡಿಸಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದೆ. ಅಲ್ಲದೇ ಈ ಜಯದೊಂದಿಗೆ ರೋಹಿತ್ ಶರ್ಮ ತವರಿನಲ್ಲಿ ನಾಯಕನಾಗಿ ಹೆಚ್ಚು ಟಿ20 ಪಂದ್ಯ ಗೆದ್ದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದ ಗೆಲುವಿನೊಂದಿಗೆ ರೋಹಿತ್ ಶರ್ಮ, ನಾಯಕನಾಗಿ ತವರಿನಲ್ಲಿ 16ನೇ ಗೆಲುವು ಸಾಧಿಸಿದ್ದು, ಏಕೈಕ ಪಂದ್ಯದಲ್ಲಿ ಸೋಲು ಕಂಡಿದ್ದಾರೆ. ಈ ಹಿಂದೆ ನಾಯಕನಾಗಿದ್ದ ವಿರಾಟ್ ಕೊಹ್ಲಿ, 13 ಪಂದ್ಯಗಳಲ್ಲಿ ಗೆಲುವು ಕಂಡಿದ್ದು, 9ರಲ್ಲಿ ಸೋಲನುಭವಿಸಿದ್ದಾರೆ. ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದೆ, 9ರಲ್ಲಿ ಸೋಲು ಕಂಡಿದ್ದಾರೆ. ನ್ಯೂಜಿ಼ಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ 15 ಪಂದ್ಯದಲ್ಲಿ ಗೆಲುವು ಹಾಗೂ 14 ಪಂದ್ಯಗಳಲ್ಲಿ ಸೋಲನುಭವಿಸಿದ್ದಾರೆ.
ಇನ್ನು ಶ್ರೀಲಂಕಾ ವಿರುದ್ಧದ 2ನೇ ಪಂದ್ಯದ ಗೆಲುವಿ ಶ್ರೀಲಂಕಾ ವಿರುದ್ಧದ 16ನೇ ಟಿ20 ಪಂದ್ಯದ ಗೆಲುವುವಾಗಿದೆ. ಆ ಮೂಲಕ ಎದುರಾಳಿ ತಂಡದ ವಿರುದ್ಧ ಅತಿಹೆಚ್ಚು T20I ಪಂದ್ಯಗಳಲ್ಲಿ ಗೆದ್ದ ದಾಖಲೆಯನ್ನು ಭಾರತ ತನ್ನದಾಗಿಸಿಕೊಂಡಿದೆ. ಈ ಹಿಂದೆ ಪಾಕಿಸ್ತಾನ, ಜಿಂಬಾಬ್ವೆ ವಿರುದ್ಧ 15 ಟಿ20 ಪಂದ್ಯಗಳನ್ನು ಗೆದ್ದು, ಎದುರಾಳಿ ತಂಡದ ವಿರುದ್ಧ ಅತಿಹೆಚ್ಚು ಟಿ20 ಪಂದ್ಯ ಗೆದ್ದ ದಾಖಲೆ ಹೊಂದಿತ್ತು.