ಕಳೆದೆರಡು ವಾರಗಳಿಂದ ನಿವೃತ್ತಿ ಸುದ್ದಿಗಳೇ ಹೆಚ್ಚಾಗಿದ್ದವು. ಸುರೇಶ್ ರೈನಾ ನಿವೃತ್ತಿ ಹೇಳಿದ ಬೆನ್ನಲ್ಲೇ ಈಶ್ವರ್ ಪಾಂಡೆ, ರಾಬಿನ್ ಉತ್ತಪ್ಪ ಆಟಕ್ಕೆ ಗುಡ್ ಬೈ ಹೇಳಿದ್ದರು. ಮಹಿಳಾ ಕ್ರಿಕೆಟರ್ ರಾಶೆಲ್ ಹೇಯ್ನ್ಸ್ ಕೂಡ ಮೈದಾನಕ್ಕೆ ವಿದಾಯ ಹೇಳಿದ್ದರು. ಈಗ ಟೆನಿಸ್ ಸರದಿ. ವಿಶ್ವದ ಸರ್ವಶ್ರೇಷ್ಠ ಆಟಗಾರ ರೋಜರ್ ಫೆಡರರ್ (Roger Federer) ವೃತ್ತಿಪರ ಟೆನಿಸ್ಗೆ (Retires Preofessional Tennis) ಬೈ ಬೈ ಅಂದಿದ್ದಾರೆ.
ಸ್ವಿಟ್ಜರ್ಲೆಂಡ್ನ (Switzerland) ಈ ಟೆನಿಸ್ ಆಟಗಾರ, ಕ್ರೀಡಾಲೋಕದ ಜಂಟಲ್ಮನ್. ಸಿಟ್ಟು ಮಾಡಿಕೊಳ್ಳದ ಫೆಡರರ್ ಅಭಿಮಾನಿಗಳಿಗೆ ಬಹು ಇಷ್ಟ. ಈತನದ್ದು ಶಾಸ್ತ್ರೋಕ್ತ ಆಟ. ಹಳಿ ತಪ್ಪದ ರೈಲಿನಂತೆ ನಿಗಿ ನಿಗಿಯಾಗಿ ಗೆದ್ದು ಬಿಡುತ್ತಿದ್ದ ಕ್ಯಾರೆಕ್ಟರ್ ರೋಜರ್ ಫೆಡರರ್ದು. ಎದುರಾಳಿ ಗೆದ್ದರೂ ಆತನ ಆಟವನ್ನು ಮೆಚ್ಚಿ ಹೊಗಳುವಂತಹ ಕ್ರೀಡಾ ಸ್ಪೂರ್ತಿಯನ್ನು ಕಂಡಿದ್ದೇ ರೋಜರ್ ಫಡರರ್ ಅನ್ನುವ ಆಟಗಾರನಲ್ಲಿ.
ಟೆನಿಸ್ ಲೋಕದಲ್ಲಿ ಈತನದ್ದು 24 ವರ್ಷಗಳ ಅದ್ಭುತ ಪ್ರಯಾಣ. ಕಳೆದೆರಡು ವರ್ಷಗಳಲ್ಲಿ ಮಾತ್ರ ಫೆಡರರ್ ಮಂಕಾಗಿ ಕಂಡಿದ್ದರು. ಅದು ಬಿಟ್ಟರೆ ಫೆಡೆಕ್ಸ್ ಇಟ್ಟಿದ್ದು ರಾಜ ನಡೆ. ವಿಂಬಲ್ಡನ್ (Wimbolden), ಫ್ರೆಂಚ್ ಓಪನ್ (French Open), ಆಸ್ಟ್ರೇಲಿಯನ್ ಓಪನ್ (Australian Open), ಯು.ಎಸ್ ಓಪನ್ (US Open) ಹೀಗೆ ಎಲ್ಲಾ ಗ್ರ್ಯಾನ್ಸ್ಲಾಂಗಳನ್ನು ಗೆದ್ದ ಕೆಲವೇ ಕೆಲವು ಸಾಧಕರಲ್ಲಿ ಒಬ್ಬರು. ಪುರುಷರ ಟೆನಿಸ್ನಲ್ಲಿ ಮೊದಲಿಗರಾಗಿ 20 ಗ್ರ್ಯಾನ್ಸ್ಲಾಂ ಗೆದ್ದ ಆಟಗಾರ. ನಡಾಲ್ (Rafael Nadal), ಜಾಕೋವಿಕ್ (Novak Djockovich) ನಡುವೆ ಫೆಡರರ್ ನಂಬರ್ ವನ್ ಆಟಗಾರನಾಗಿಯೇ ಹೆಚ್ಚು ಕಾಲ ಕಾಣಿಸಿಕೊಂಡಿದ್ದರು.
ವಿಂಬಲ್ಡನ್ನಲ್ಲಿ ಈತ ಕಿಂಗ್. ಹೀಗಾಗಿ 8 ಬಾರಿ ಲಾನ್ ಟೆನಿಸ್ ಕೋರ್ಟ್ನಲ್ಲಿ ಚಾಂಪಿಯನ್ ಆಗಿದ್ದಾರೆ. 6 ಬಾರಿ ಆಸ್ಟ್ರೇಲಿಯಾದ ಹಾರ್ಡ್ಕೋರ್ಟ್ನಲ್ಲಿ ಮಿರಮಿರ ಮಿಂಚುವ ಕಪ್ ಎತ್ತಿದ್ದಾರೆ. 5 ಬಾರಿ ಯುಎಸ್ ಓಪನ್ನ ಆರ್ಥರ್ ಆಶ್ ಕ್ರೀಡಾಂಗನದಲ್ಲಿ ಗೆಲುವಿನ ಭಾಷಣ ಮಾಡಿದ್ದಾರೆ. ಫ್ರೆಂಚ್ ಓಪನ್ನ ಆವೆ ಮಣ್ಣಿನಲ್ಲಿ ಹಲವು ಬಾರಿ ಜಾರಿ ಬಿದ್ದರೂ ಏಕೈಕ ಪ್ರಶಸ್ತಿ ಕೂಡ ಫೆಡೆಕ್ಸ್ ಮುಡಿಗೇರಿದೆ. ಇಂತಹ ಅಮೋಘ ಆಟವನ್ನು ಅಭಿಮಾನಿಗಳಿಗೆ ಉಣಬಿಡಿಸಿದ ರೋಜರ್ ಫೆಡಡರ್ ಲಂಡನ್ನಲ್ಲಿ ನಡೆಯುವ ಲೆವರ್ ಕಪ್ (Lever Cup) ಎಟಿಪಿಯಲ್ಲಿ ಕೊನೆಯ ಬಾರಿಗೆ ಆಡಲಿದ್ದಾರೆ.
41 ವರ್ಷ ವಯಸ್ಸಿನ ಫೆಡರರ್ ಕಳೆದ ಕೆಲ ವರ್ಷಗಳಿಂದ ಮೊಣಕಾಲಿನ ಸಮಸ್ಯೆಯಿಂದ ಬಳಲಿದ್ದರು. ಆದರೂ ನಡಾಲ್ ಮತ್ತು ಜಾಕೋವಿಕ್ ಜೊತೆಗೆ ಪ್ರಶಸ್ತಿ ಫೈಟ್ನಲ್ಲಿ ಹಿಂದೆ ಬೀಳಲಿಲ್ಲ. ಈಗ ನಡಾಲ್ ಮತ್ತು ಜಾಕೋವಿಕ್ ಫೆಡರರ್ ಗೆದ್ದ ಗ್ರ್ಯಾನ್ಸ್ಲಾಂಗಿಂತ ಹೆಚ್ಚು ಗೆದ್ದು ಮುಂದಕ್ಕೆ ಸಾಗಿದರೂ ಫೆಡರರ್ ಆಟವನ್ನೂ ಎಂದೂ ಮರೆಯುವ ಹಾಗಿಲ್ಲ.