ಮಾಜಿ ವಿಶ್ವಕಪ್ ವಿಜೇತ ಆಲ್ರೌಂಡರ್ ರೋಜರ್ ಬಿನ್ನಿ ನಿರೀಕ್ಷೆಯಂತೆಬಿಸಿಸಿಐನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಮಂಗಳವಾರ ಮುಂಬೈನಲ್ಲಿ ನಡೆದ ವಿಶೇಷ ವಾರ್ಷಿಕ ಸಭೆಯಲ್ಲಿ ರೋಜರ್ ಬಿನ್ನಿ ಅವಿರೋಧವಾಗಿ ಆಯ್ಕೆಯಾದರು. ಇದರೊಂದಿಗೆ 3 ವರ್ಷಗಳ ಕಾಲ ಆಡಳಿತ ನಡೆಸಿದ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಆಡಳಿತ ಅಂತ್ಯವಾಗಿದೆ. ಇವರ ಉತ್ತಾರಾಧಿಕಾರಿಯಾಗಿ 67 ವರ್ಷದ ರೋಜರ್ ಬಿನ್ನಿ ಆಯ್ಕೆಯಾಗಿದ್ದಾರೆ.
1979 ರಿಂದ 1987ರವರೆಗೆ ರೋಜರ್ ಬಿನ್ನಿ ಭಾರತ ತಂಡದಲ್ಲಿ 27 ಟೆಸ್ಟ್ ಮತ್ತು 72 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 2019ರಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ.
1983ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ಭಾರತ ತಂಡ ವಿಶ್ವಕಪ್ ಗೆದ್ದಾಗ ರೋಜರ್ ಬಿನ್ನಿ ತಂಡದ ಭಾಗವಾಗಿದ್ದರು. ರೋಜರ್ ಬಿನ್ನಿ ಟೂರ್ನಿಯಲ್ಲಿ 8 ಪಂದ್ಯಗಳಿಂದ 18 ವಿಕೆಟ್ ಪಡೆದಿದ್ದರು.
ಇನ್ನು ಜಯ್ ಶಾ ನಿರೀಕ್ಷೆಯಂತೆ ಕಾರ್ಯದರ್ಶಿಯಾಗಿ ಮುಂದುವರೆಯಲಿದ್ದಾರೆ. 2019ರಿಂದೂ ಜಯ್ ಶಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸು್ತ್ತಾ ಬಂದಿದ್ದಾರೆ.
ಮಹಾರಾಷ್ಟ್ರದ ಬಿಜೆಪಿಯ ನಾಯಕ ಆಶೀಶ್ ಶೆಲಾರ್ ನೂತನ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಅರ್ಜುನ್ ಸಿಂಗ್ ಧುಮಲ್ ಖಜಾಂಚಿಯಾಗಿದ್ದರು.
ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ದೇವಜಿತ್ ಸಾಯಿಕಾ ಆಯ್ಕೆಯಾಗಿದ್ದಾರೆ.
ಇನ್ನು ಐಪಿಎಲ್ ಮುಖ್ಯಸ್ಥನ ಸ್ಥಾನವನ್ನು ಅರ್ಜುನ್ ಸಿಂಗ್ ಧುಮಲ್ ಪಡೆದಿದ್ದಾರೆ. ಈ ಹಿಂದೆ ಮುಖ್ಯಸ್ಥರಾಗಿದ್ದ ಬ್ರಿಜೇಶ್ ಪಟೇಲ್ ಅವರ ಆಡಳಿತ ಪೂರ್ಣಗೊಂಡಿದೆ.