ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್, ಸಹ ಆಟಗಾರ ಶಾರ್ದೂಲ್ ಥಾಕೂರ್ ಹಾಗೂ ಸಹಾಯಕ ಕೋಚ್ ಪ್ರವೀಣ್ ಆಮ್ರೆ ಅವರಿಗೆ ದಂಡ ವಿಧಿಸಲಾಗಿದೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆ ಐಪಿಎಲ್ನ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ರಿಷಬ್ ಪಂತ್ ಹಾಗೂ ಸಹಾಯಕ ಕೋಚ್ ಪ್ರವೀಣ್ ಆಮ್ರೆ ಅವರಿಗೆ ಪಂದ್ಯದ ಶೇ.100ರಷ್ಟು ದಂಡವನ್ನು ಹಾಗೂ ತಂಡದ ಸಹ ಆಟಗಾರ ಶಾರ್ದೂಲ್ ಥಾಕೂರ್ ಅವರಿಗೆ ಶೇ.50ರಷ್ಟು ದಂಡ ವಿಧಿಸಲಾಗಿದೆ. ಈ ನಡುವೆ ಅಂಪೈರ್ ಅವರೊಂದಿಗೆ ನೇರವಾಗಿ ಮೈದಾನಕ್ಕೆ ತೆರಳಿ ಅಂಪೈರ್ ಜೊತೆಗೆ ವಾಗ್ವಾದ ನಡೆಸಿದ ಕಾರಣಕ್ಕೆ ಡೆಲ್ಲಿ ತಂಡದ ಅಸಿಸ್ಟೆಂಟ್ ಕೋಚ್, ಪ್ರವೀಣ್ ಆಮ್ರೆ ಅವರನ್ನ ಒಂದು ಪಂದ್ಯದಿಂದ ಬ್ಯಾನ್ ಮಾಡುವ ಮೂಲಕ ಕಠಿಣ ಕ್ರಮಕೈಗೊಳ್ಳಲು ಐಪಿಎಲ್ ಆಡಳಿತ ಮಂಡಳಿ ತೀರ್ಮಾನಿಸಿದೆ.
ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಆರ್ಟಿಕಲ್ 2.7ರ ಅಡಿಯಲ್ಲಿ ರಿಷಬ್ ಪಂತ್ ಅವರನ್ನ 2ನೇ ಹಂತದ ಅಪರಾಧವೆಂದು ಪರಿಗಣಿಸಲಾಗಿದೆ. ಇನ್ನೂ ಮೈದಾನಕ್ಕೆ ಪ್ರವೇಶಿಸಿದ್ದ ಪ್ರವೀಣ್ ಆಮ್ರೆ, ಐಪಿಎಲ್ ನೀತಿಸಂಹಿತೆಯ ಆರ್ಟಿಕಲ್ 2.2ರ ಲೆವೆಲ್-2 ಅಪರಾಧವೆಂದು ಹಾಗೂ ಶಾರ್ದೂಲ್ ಥಾಕೂರ್ ಅವರು ಆರ್ಟಿಕಲ್ 2.8ರ ಅಡಿಯಲ್ಲಿ 2ನೇ ಹಂತದ ಅಪರಾಧ ಮಾಡಿದ್ದಾರೆ ಎಂದು ಐಪಿಎಲ್ ಆಡಳಿತ ಮಂಡಳಿ ಈ ಮೂವರಿಗೆ ದಂಡವಿಧಿಸಿದೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ನೋ-ಬಾಲ್ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಗೊಂದಲ ಉಂಟಾಗಿತ್ತು. ಈ ವೇಳೆ ಕಣದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ರೋವ್ಮನ್ ಪೋವಲ್ ಹಾಗೂ ಕುಲ್ದೀಪ್ ಯಾದವ್, ಆನ್ಫೀಲ್ಡ್ ಅಂಪೈರ್ ಅವರ ತೀರ್ಪನ್ನು ಪ್ರಶ್ನಿಸಿದ್ದರು.
ಈ ನಡುವೆ ಡಗೌಟ್ನಲ್ಲಿ ಕುಳಿತಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಸೇರಿದಂತೆ ಇನ್ನಿತರ ಆಟಗಾರರು ಹಾಗೂ ಸಹ ಸಿಬ್ಬಂದಿ ಸಹ ಅಂಪೈರ್ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಡೆಲ್ಲಿ ತಂಡದ ಅಸಿಸ್ಟೆಂಟ್ ಕೋಚ್ ಪ್ರವೀಣ್ ಆಮ್ರೆ, ನೇರವಾಗಿ ಮೈದಾನಕ್ಕೆ ತೆರಳಿ, ಆನ್ ಫೀಲ್ಡ್ ಅಂಪೈರ್ ನಿತಿನ್ ಮೆನನ್ ಅವರೊಂದಿಗೆ ನೋ-ಬಾಲ್ ತೀರ್ಪಿನ ವಿಚಾರವಾಗಿ ಪ್ರಶ್ನಿಸಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರು ಹಾಗೂ ತಂಡದ ಸಹ ಸಿಬ್ಬಂದಿಯ ಈ ವರ್ತನೆ, ಮಾಜಿ ಕ್ರಿಕೆಟಿಗರ ಅಸಮಾಧಾನಕ್ಕೆ ಕಾರಣವಾಗಿದೆ.