ಪ್ರಸಕ್ತ ಐಪಿಎಲ್ನ ಕೊನೆಯ ಲೀಗ್ ಪಂದ್ಯ ಆಡುತ್ತಿರುವ ಆರ್ಸಿಬಿ ಪ್ಲೇ ಆಫ್ ಕನಸು ಕಾಣುತ್ತಿದ್ದು ಮಹತ್ವದ ಪಂದ್ಯದಲ್ಲಿ ಇಂದು ಬಲಿಷ್ಠ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.
ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್ಸಿಬಿ ಇಂದು ಗೆದ್ದರೆ ನೇರವಾಗಿ ಪ್ಲೇ ಆಫ್ ಪ್ರವೇಶಿಸಲಿದೆ. ನಾಲ್ಕನೆ ಸ್ಥಾನದಲ್ಲಿರುವ ಮುಂಬೈಗಿಂತ (-0.128) ಆರ್ಸಿಬಿ (0.180) ಒಳ್ಳೆಯ ನೆಟ್ ರನ್ ರೇಟ್ ಹೊಂದಿದೆ.
ತವರಿನಲ್ಲಿ ಆಡುತ್ತಿರುವ ಆರ್ಸಿಬಿಗೆ ಅಭಿಮಾನಿಗಳ ಬೆಂಬಲವೂ ಸಿಗಲಿದೆ. ಪಂದ್ಯ ಆರಂಭಕ್ಕೂ ಮುನ್ನ ಆರ್ಸಿಬಿಗೆ ಮುಂಬೈ ಹಾಗೂ ಸನ್ರೈಸರ್ಸ್ ನಡುವಿನ ಫಲಿತಾಂಶ ಸಿಗಲಿದೆ.
ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು ಆರ್ಸಿಬಿಗೆ ಸೋಲಿಸುವುದು ಅಷ್ಟು ಸುಲಭವಿಲ್ಲ. ನಾಯಕ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಗುಜರಾತ್ ಟೂರ್ನಿವುದಕ್ಕೂ ಅಮೋಘ ಪ್ರದರ್ಶನ ನೀಡಿ ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆದಿದೆ.
ಗುಜರಾತ್ 9 ಪಂದ್ಯಗಳನ್ನು ಗೆದ್ದು 4 ಪಂದ್ಯಗಳಲ್ಲಿ ಸೋತು 18 ಅಂಕಗಳನ್ನು ಪಡೆದಿದೆ. ಆರ್ಸಿಬಿ, ಮುಂಬೈ, ರಾಜಸ್ಥಾನ ತಲಾ 14 ಅಂಕಗಳನ್ನು ಪಡೆದಿವೆ.
ಉಭಯ ತಂಡಗಳು ಮೊನ್ನೆ ದೊಡ್ಡ ಗೆಲುವನ್ನು ಕಂಡಿವೆ. ಆರ್ಸಿಬಿ 8 ವಿಕೆಟ್ಗಳಿಮದ ಗೆದ್ದುಕೊಂಡಿತು. ಗುಜರಾತ್ ಟೈಟಾನ್ಸ್ 34 ರನ್ಗಳಿಂದ ಗೆದ್ದುಕೊಂಡಿತು.
ಆರ್ಸಿಬಿ ತಂಡ ಮೊನ್ನೆ 186 ರನ್ಗಳನ್ನ ಚೇಸ್ ಮಾಡಿದ ಅನುಭವ ಹೊಂದಿದ್ದು ಟೈಟಾನ್ಸ್ ವಿರುದ್ಧದ ಕದನಕ್ಕೆ ಆತ್ಮವಿಶ್ವಾಸ ಹೆಚ್ಚಿಸಲಿದೆ.
ಆರ್ಸಿಬಿ ಎದುರಾಳಿಯನ್ನು ನೋಡುವ ರೀತಿ ಮತ್ತು ಆತ್ಮವಿಶ್ವಾಸ ಈ ಎಲ್ಲಾ ಕಾರಣಗಳಿಂದ ಇಂದಿನ ಪಂದ್ಯ ಕುತೂಹಲಕಾರಿಯಾಗಿದೆ.
ಕೆಜಿಎಫ್ ಖ್ಯಾತಿಯ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ಹಾಗು ಫಾಫ್ ಡುಪ್ಲೆಸಿಸ್ ಇವರ ಬ್ಯಾಟಿಂಗ್ ಎಲ್ಲರ ಕೇಂದ್ರ ಬಿಂದುವಾಗಿದೆ.
ನಾಯಕ ಫಾಫ್ ಡುಪ್ಲೆಸಿಸ್ 13 ಪಂದ್ಯಗಳಿಂದ 631 ರನ ಹೊಡೆದು ಅತಿ ಹೆಚ್ಚು ರನ್ ಹೊಡೆದು ಆರೆಂಜ್ ಕ್ಯಾಪ್ ಪಡೆದಿದ್ದಾರೆ. ಜತೆಗೆ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ (34 ಸಿಕ್ಸ್) ಸಿಡಿಸಿದ್ದಾರೆ. ಕೊಹ್ಲಿ 438 ರನ್ ಹೊಡೆದು ಆರನೆ ಸ್ಥಾನದಲ್ಲಿದ್ದಾರೆ.
ಕೊಹ್ಲಿ, ಡುಪ್ಲೆಸಿಸ್ ಮತ್ತು ಮ್ಯಾಕ್ಸ್ ವೆಲ್ ಅವರುಗಳನ್ನು ಆರ್ಸಿಬಿ ನೆಚ್ಚಿಕೊಂಡಿದೆ. ಗುಜರಾತ್ ಬೌಲರ್ಗಳು ಆರ್ಸಿಬಿ ಬ್ಯಾಟಿಂಗ್ ಕ್ರಮಾಂಕವನ್ನು ಧ್ವಂಸ ಮಾಡಲು ಒಳದಾರಿಯನ್ನು ಹುಡುಕಬೇಕಿದೆ.
ಆರ್ಸಿಬಿ ಪರ ಮೊಹ್ಮದ್ ಸಿರಾಜ್ ತಂಡದ ಪರ ಅತ್ಯುತ್ತಮ ಬೌಲರ್ರಾಗಿ ಹೊರಹೊಮ್ಮಿದ್ದಾರೆ. ತಂಡದ ಮತ್ತೋರ್ವ ವೇಗಿ ವಾಯ್ನೆ ಪಾರ್ನೆಲ್ ಮತ್ತೊಮ್ಮೆ ಜವಾಬ್ದಾರಿ ಹೊತ್ತುಕೊಳ್ಳಬೇಕಿದೆ.
ಗುಜರಾತ್ ತಂಡದ ಶುಭಮನ್ ಗಿಲ್, ವೃದ್ದಿಮಾನ್ ಸಾಹಾ, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಶುಭ್ಮನ್ ಗಿಲ್ ಮೊನ್ನೆ ಶತಕ ಸಿಡಿಸಿದ್ದು ಆರ್ಸಿಬಿ ವಿರುದ್ಧ ದೊಡ್ಡ ಇನ್ನಿಂಗ್ಸ್ ಕಟ್ಟುವ ಸಾಧ್ಯತೆ ಇದೆ.
ಬೌಲಿಂಗ್ ವಿಭಾಗದಲ್ಲಿ ಮೊಹ್ಮದ್ ಶಮಿ, ರಶೀದ್ ಖಾನ್ ಮತ್ತು ಮೋಹಿತ್ ಶರ್ಮಾ ಸ್ಪರ್ಧಾತ್ಮಕ ಸವಾಲು ನೀಡಲಿದ್ದಾರೆ.
ಪಂದ್ಯಕ್ಕೆ ಮಳೆ ಭೀತಿ
ಇಂದು ಆರ್ಸಿಬಿ ಮತ್ತು ಗುಜರಾತ್ ನಡುವಿನ ಕದನಕ್ಕೆ ಮಳೆ ಭೀತಿ ಇದೆ. ಹವಾಮಾನ ವೈಪರೀತ್ಯ ಗಮನಿಸಿದರೆ ಮಳೆಯಾಗುವ ಎಲ್ಲಾ ಸಾಧ್ಯತೆ ಇದ್ದು . ಮಹತ್ವದ ಪಂದ್ಯ ಅಭಿಮಾನಿಗಳಿಗೆ ನಿರಾಸೆ ಮೂಡಿಸುವ ಸಾಧ್ಯತೆ ಹೆಚ್ಚಿದೆ.