RCB & IPL – ಆರ್ ಸಿಬಿಯ ಆ ದಿನಗಳು ಹೇಗಿದ್ದವು ? ಮೊದಲ ಬಲಿ ಯಾರು ?

ಯಾರು ಬೇಕಾದ್ರೂ ಏನೇ ಹೇಳಲಿ.. ಇವತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜನಪ್ರಿಯತೆಯನ್ನು ಪಡೆದುಕೊಳ್ಳಲು ಪ್ರಮುಖ ಕಾರಣ ಮದ್ಯದ ದೊರೆ ವಿಜಯ್ ಮಲ್ಯ.
ಸಾಲ ಮಾಡಿ ದೇಶ ಬಿಟ್ಟು ಓಡಿ ಹೋಗಿರುವ ವಿಜಯ್ ಮಲ್ಯ ಅವರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕನಸಿನ ಕೂಸು ಆಗಿತ್ತು. ಮುಂದೊಂದು ದಿನ ಐಪಿಎಲ್ ದೊಡ್ಡ ಉದ್ಯಮವಾಗುತ್ತದೆ. ಸಾವಿರಾರು ಕೋಟಿ ರೂಪಾಯಿಯ ವಹಿವಾಟು ನಡೆಸುತ್ತದೆ ಎಂಬ ದೂರದೃಷ್ಟಿ ಅವರಲ್ಲಿತ್ತು. ಅದಕ್ಕಾಗಿಯೇ ವಿಜಯ್ ಮಲ್ಯ ಆರ್ ಸಿಬಿ ತಂಡದ ಬ್ರ್ಯಾಂಡ್ ಪ್ರಚಾರಕ್ಕಾಗಿ ಕೋಟಿ ಕೋಟಿ ಹಣ ಖರ್ಚು ಮಾಡಿದ್ದರು. ಆರ್ ಸಿಬಿ ತಂಡದೊಂದಿಗೆ ತನ್ನ ಉದ್ಯಮವನ್ನು ವಿಸ್ತಾರ ಮಾಡಿಕೊಳ್ಳಬಹುದು ಎಂಬ ಲೆಕ್ಕಚಾರವೂ ವಿಜಯ್ ಮಲ್ಯ ಅವರಿಗಿತ್ತು. ಆದ್ರೆ ಕಿಂಗ್ಸ್ ಫಿಶರ್ ವಿಮಾನಯಾನದಲ್ಲಿ ನಷ್ಟ ಮಾಡಿಕೊಂಡು ಕೊನೆಗೆ ದೇಶವನ್ನು ಬಿಟ್ಟು ಹೋದ್ರು. ಆದ್ರೂ ಆರ್ ಸಿಬಿ ಅಂದಾಗ ಮೊದಲು ನೆನಪಾಗೋದು ವಿಜಯ್ ಮಲ್ಯ.

ಹೌದು, ವಿಜಯ್ ಮಲ್ಯ ಅವರು ಆರ್ ಸಿಬಿ ತಂಡಕ್ಕೆ ಸೆಲೆಬ್ರಿಟಿ ನಂಟಿನ ಜೊತೆ ಬಾಲಿವುಡ್ ಟಚ್ ಕೂಡ ನೀಡಿದ್ದರು. ದೀಪಿಕಾ ಪಡುಕೊಣೆ, ಕತ್ರಿನಾ ಕೈಫ್ ಸೇರಿದಂತೆ ಹಲವು ಸಿನಿ ತಾರೆಯರು ಆರ್ ಸಿಬಿ ತಂಡದ ಪರ ಪ್ರಚಾರ ಮಾಡಿದ್ದರು. ಪ್ರತಿ ಪಂದ್ಯವನ್ನು ವೀಕ್ಷಿಸುತ್ತಿದ್ದ ವಿಜಯ್ ಮಲ್ಯ ಆರ್ ಸಿಬಿಯ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಷಿಸುವಂತೆ ಮಾಡಿದ್ದರು. ಇದು ಏನಿದ್ರೂ ಈಗ ಗತಕಾಲದ ವೈಭವ. ಆ ವೈಭವದ ದಿನಗಳು ಆರ್ ಸಿಬಿ ತಂಡದಲ್ಲಿ ಬರುವುದು ಕಷ್ಟ.. ಅದು ಕೂಡ ವಿಜಯ್ ಮಲ್ಯ ಇಲ್ಲದೆ ಅದು ಸಾಧ್ಯನೇ ಇಲ್ಲ.
ಅಷ್ಟಕ್ಕೂ ಆರ್ ಸಿಬಿ ತಂಡ ಹುಟ್ಟಿಕೊಂಡಿದ್ದು ಹೇಗೆ ? ಈ ಪ್ರಶ್ನೆಗೂ ಮೊದಲ ಉತ್ತರ ವಿಜಯ್ ಮಲ್ಯ. 111.6 ಮಿಲಿಯನ್ ಡಾಲರ್ ಹಣವನ್ನು ನೀಡಿ ಐಪಿಎಲ್ ನ ಬೆಂಗಳೂರು ಫ್ರಾಂಚೈಸಿಯನ್ನು ಖರೀದಿ ಮಾಡಿದ್ದರು. ರಾಹುಲ್ ದ್ರಾವಿಡ್ ಆರ್ ಸಿಬಿಯ ಮೊದಲ ಐಕಾನ್ ಪ್ಲೇಯರ್.
ಚೊಚ್ಚಲ ಐಪಿಎಲ್ ನಲ್ಲಿ ಆರ್ ಸಿಬಿ ತಂಡದ ನಾಯಕನ ಹೊಣೆಯನ್ನು ವಹಿಸಿದ್ದು ರಾಹುಲ್ ದ್ರಾವಿಡ್. ತಂಡದ ಮೊದಲ ಸಿಇಒ ಚಾರು ಶರ್ಮಾ. ಮಾರ್ಟಿನ್ ಕ್ರೋವ್ ಅವರು ಚೀಫ್ ಕ್ರಿಕೆಟಿಂಗ್ ಆಫೀಸರ್ ಆಗಿದ್ದರು.
ಹೀಗಾಗಿ ರಾಹುಲ್ ದ್ರಾವಿಡ್ ಮತ್ತು ಚಾರು ಶರ್ಮಾ ಅವರಿಗೆ ಆರ್ ಸಿಬಿ ತಂಡವನ್ನು ಕಟ್ಟುವ ಜವಾಬ್ದಾರಿಯನ್ನು ವಹಿಸಿದ್ದರು. ಸಿಇಒ ಚಾರು ಶರ್ಮಾ ಮತ್ತು ರಾಹುಲ್ ದ್ರಾವಿಡ್ ಯಾವೆಲ್ಲಾ ಆಟಗಾರರನ್ನು ಖರೀದಿ ಮಾಡಬೇಕು ಎಂಬ ಲಿಸ್ಟ್ ಮಾಡಿಕೊಂಡು ಬಿಡ್ಡಿಂಗ್ ನಲ್ಲಿ ಆಟಗಾರರನ್ನು ಖರೀದಿ ಮಾಡಿದ್ದರು.
ಇದಕ್ಕು ಮೊದಲು ನಾಯಕ ರಾಹುಲ್ ದ್ರಾವಿಡ್ ಅವರು ಆಗಿನ ಕರ್ನಾಟಕದ ಕೋಚ್ ಆಗಿದ್ದ ವಿಜಯ್ ಭಾರದ್ವಾಜ್ ಜೊತೆ ಸೇರಿಕೊಂಡು ಸ್ಥಳೀಯ ಆಟಗಾರರು ಮತ್ತು ಭಾರತೀಯ ಆಟಗಾರರು ಮತ್ತು ವಿದೇಶಿ ಆಟಗಾರರ ಪಟ್ಟಿಯನ್ನು ಸಿದ್ಧಗೊಳಿಸಿದ್ದರು. ಆಗ ಐಪಿಎಲ್ ಬಿಡ್ಡಿಂಗ್ ಯಾವ ರೀತಿ ನಡೆಯುತ್ತೇ ಅನ್ನೋ ಅಂದಾಜು ಕೂಡ ಯಾರಿಗೂ ಇರಲಿಲ್ಲ. ಹೀಗಾಗಿ ದ್ರಾವಿಡ್ ಮತ್ತು ಭಾರದ್ವಾಜ್ ಅವರು ಸಾಕಷ್ಟು ಹೋಮ್ ವರ್ಕ್ ಮಾಡಿಕೊಂಡು ಬಿಡ್ಡಿಂಗ್ ನಲ್ಲಿ ಆಟಗಾರರನ್ನು ಖರೀದಿ ಮಾಡಿದ್ದರು. ಇದಕ್ಕೆ ಸಿಇಒ ಚಾರು ಶರ್ಮಾ ಕೂಡ ಸಾಥ್ ನೀಡಿದ್ದರು. ಹಾಗೇ ಮಾಲೀಕ ವಿಜಯ್ ಮಲ್ಯ ಕೂಡ ಒಪ್ಪಿಗೆ ನೀಡಿದ್ದರು.
ಆದ್ರೆ ಬಿಡ್ಡಿಂಗ್ ನಲ್ಲಿ ಆಟಗಾರರನ್ನು ಖರೀದಿ ಮಾಡಿದ ನಂತರ ಮಾಲೀಕರಾದ ವಿಜಯ್ ಮಲ್ಯ ಅವರಿಗೆ ಮಂಡೆ ಬಿಸಿ ಶುರುವಾಯ್ತು. ಮಾಧ್ಯಮಗಳಲ್ಲಿ ಆರ್ ಸಿಬಿ ತಂಡವನ್ನು ಟೆಸ್ಟ್ ತಂಡ ಅಂತ ಬಿಂಬಿಸಲಾಗಿತ್ತು. ಇದು ವಿಜಯ್ ಮಲ್ಯ ಅವರಿಗೆ ಸಿಟ್ಟು ತರಿಸಿತ್ತು. ಆದ್ರೂ ರಾಹುಲ್ ದ್ರಾವಿಡ್ ಮತ್ತು ಚಾರುಶರ್ಮಾ ಮಲ್ಯ ಅವರನ್ನು ಸಮಾಧಾನಪಡಿಸಲು ಯಶಸ್ವಿಯಾದ್ರು. RCB & IPL – Bangalore franchise was purchased by Vijay Mallya
ಇದಕ್ಕೆ ಕಾರಣವೂ ಇದೆ. ಆರ್ ಸಿಬಿ ತಂಡದಲ್ಲಿ ಆಗ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಹೀರ್ ಖಾನ್, ರಾಸ್ ಟೇಲರ್, ಜಾಕ್ ಕಾಲಿಸ್, ಮಾರ್ಕ್ ಬೌಷರ್, ಕೆಮರೂನ್ ವೈಟ್, ಮಿಸ್ಬಾ ಉಲ್ ಹಕ್, ಶಿವನಾರಾಯಣ್ ಚಂದ್ರಪಾಲ್, ವಾಸಿಮ್ ಜಾಫರ್, ಅಬ್ದುರ್ ರಝಾಕ್ ಮೊದಲಾದ ಆಟಗಾರರು ಇದ್ದರು. ಸಹಜವಾಗಿಯೇ ತಂಡದಲ್ಲಿದ್ದ ಎಲ್ಲಾ ಆಟಗಾರರು ಕೂಡ ಟೆಸ್ಟ್ ಸ್ಪೇಷಲಿಸ್ಟ್ ಗಳು.

ಇನ್ನೊಂದೆಡೆ ಆರ್ ಸಿಬಿ ಆಡಿದ್ದ 14 ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಮಾತ್ರ ಗೆದ್ದುಕೊಂಡು ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿತ್ತು. ಈ ನಡುವೆ ಟೂರ್ನಿಯ ಅರ್ಧದಲ್ಲೇ ವಿಜಯ್ ಮಲ್ಯ ಅವರ ಕೆಂಗಣ್ಣಿಗೆ ಗುರಿಯಾಗಿದ್ದು ಸಿಇಒ ಚಾರು ಶರ್ಮಾ. ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿದ್ದ ವಿಜಯ್ ಮಲ್ಯ ಅವರು ಚಾರು ಶರ್ಮಾ ಅವರಿಗೆ ಸಾರ್ವಜನಿಕವಾಗಿಯೇ ಟೀಕೆ ಮಾಡಿದ್ದರು. ಈ ಆಘಾತದಿಂದ ಚಾರು ಶರ್ಮಾ ಅವರಿಗೆ ಹೊರಬರಲು ಸುಮಾರು ತಿಂಗಳುಗಳೇ ಬೇಕಾಗಿದ್ದವು. ಹಾಗೇ ಮಾರ್ಟಿನ್ ಕ್ರೋವ್ ಅವರನ್ನು ಕೂಡ ವಜಾ ಮಾಡಲಾಗಿತ್ತು. ಬಳಿಕ ಬ್ರಿಜೆಶ್ ಪಟೇಲ್ ಆರ್ ಸಿಬಿಯ ಸಿಇಒ ಆಗಿದ್ದರು. ಎರಡನೇ ಆವೃತ್ತಿಯಲ್ಲಿ ಕೆವಿನ್ ಪೀಟರ್ಸನ್ ತಂಡದ ನಾಯಕನಾದ್ರು. ಆದ್ರೆ ಪೀಟರ್ಸನ್ ಟೂರ್ನಿಯ ಅರ್ಧದಿಂದಲೇ ತವರಿಗೆ ತೆರಳಿದ್ದರು. ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಟೂರ್ನಿಯ ಮೊದಲ ಆರು ಪಂದ್ಯಗಳಲ್ಲಿ ಆರ್ ಸಿಬಿ ಗೆದ್ದಿದ್ದು ಎರಡು ಪಂದ್ಯಗಳನ್ನು ಮಾತ್ರ. ಬಳಿಕ ತಂಡದ ನಾಯಕತ್ವ ವಹಿಸಿಕೊಂಡಿದ್ದು ಅನಿಲ್ ಕುಂಬ್ಳೆ. ಅನಿಲ್ ಕುಂಬ್ಳೆ ನಾಯಕತ್ವದಲ್ಲಿ ಆರ್ ಸಿಬಿ ಫೈನಲ್ ಗೆ ಪ್ರವೇಶಿಸಿತ್ತು. ಆದ್ರೆ ಫೈನಲ್ ನಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಸೋಲು ಅನುಭವಿಸಿತ್ತು.

ಏತನ್ಮಧ್ಯೆ, ಅನಿಲ್ ಕುಂಬ್ಳೆ ಮತ್ತು ರಾಹುಲ್ ದ್ರಾವಿಡ್ ವಿರಾಟ್ ಕೊಹ್ಲಿಯವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಯಶಸ್ವಿಯಾದ್ರು. ಮೊದಲ ಎರಡು ಆವೃತ್ತಿಗಳಲ್ಲಿ ಕೊಹ್ಲಿ ಅಷ್ಟೊಂದು ಉತ್ತಮ ಪ್ರದರ್ಶನ ನೀಡಿರಲಿಲ್ಲ. ಆದ್ರೆ ಕುಂಬ್ಳೆ ಮತ್ತು ರಾಹುಲ್ ದ್ರಾವಿಡ್ ಕೊಹ್ಲಿಯ ಬೆಂಬಲಕ್ಕೆ ನಿಂತಿದ್ದರು. ವಿಪರ್ಯಾಸ ಅಂದ್ರೆ ಅದೇ ವಿರಾಟ್ ಕೊಹ್ಲಿ ಅನಿಲ್ ಕುಂಬ್ಳೆ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿದ್ದಾಗ ಡಿಚ್ಚಿ ಹೊಡೆದಿದ್ರು.
ಒಟ್ಟಿನಲ್ಲಿ ಕಳೆದ 14 ವರ್ಷಗಳಲ್ಲಿ ಆರ್ ಸಿಬಿ ಕಪ್ ಗೆಲ್ಲದೇ ಇದ್ದಿರಬಹುದು. ಆದ್ರೆ ಹಲವು ರೋಚಕ ಪಂದ್ಯಗಳನ್ನು ಆಡಿದೆ. ರೋಚಕ ಗೆಲುವುಗಳನ್ನು ದಾಖಲಿಸಿದೆ. ಹಲವು ಕ್ರಿಕೆಟಿಗರ ಬೆಳವಣಿಗೆಗೆ ಕಾರಣವಾಗಿದೆ. ಆದ್ರೆ ಬಿಂದಾಸ್ ಮಾಲೀಕ ವಿಜಯ್ ಮಲ್ಯ ಈಗ ಆರ್ ಸಿಬಿ ತಂಡದ ಜೊತೆಯಲ್ಲಿಲ್ಲ…!