IPL 2022 – ಈ ಬಾರಿಯ ಐಪಿಎಲ್ ಟೂರ್ನಿಗೆ ಸಾಮೂಹಿಕ ನಾಯಕತ್ವ – ಆರ್ ಸಿಬಿ ಹೈಕಮಾಂಡ್ ನಿರ್ಧಾರ..?

ಐಪಿಎಲ್ ಮೆಗಾ ಹರಾಜು ಮುಗಿದು ಆಲ್ ಮೋಸ್ಟ್ ಒಂದು ತಿಂಗಳಾಗುತ್ತಿದೆ. ಈ ನಡುವೆ ಬಿಸಿಸಿಐ ಮತ್ತು ಐಪಿಎಲ್ ಗವರ್ನಿಂಗ್ ಕೌನ್ಸಿಲ್ 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಮುಹೂರ್ತ ಕೂಡ ಫಿಕ್ಸ್ ಮಾಡಿದೆ. ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಇನ್ನು ನಮ್ಮ ಆರ್ ಸಿಬಿ ಬಿಟ್ಟು ಉಳಿದೆಲ್ಲಾ ತಂಡಗಳ ನಾಯಕ ಯಾರು ಎಂಬುದನ್ನು ಬಹಿರಂಗಪಡಿಸಿದೆ. ಆದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇನ್ನೂ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.
ಅಂದ ಹಾಗೇ ಆರ್ ಸಿಬಿ ಕಥೆ ಹೇಗಾಗಿದೆ ಅಂದ್ರೆ ನಮ್ಮ ರಾಜಕೀಯ ಪಕ್ಷಗಳ ಥರಾ ಆಗಿಬಿಟ್ಟಿದೆ.
ಅದರಲ್ಲೂ ರಾಜ್ಯ ಕಾಂಗ್ರೆಸ್ ಪಕ್ಷದ ಪರಿಸ್ಥಿತಿಯಲ್ಲಿದೆ ಆರ್ ಸಿಬಿ ತಂಡ. ಚುನಾವಣೆಗೆ ಮುನ್ನ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುವುದು. ಫಲಿತಾಂಶ ಬಂದ ನಂತರ ನಾಯಕನನ್ನು ಆಯ್ಕೆ ಮಾಡೋ ಹಾಗೇ ಈ ಬಾರಿಯ ಐಪಿಎಲ್ ನಲ್ಲಿ ಆರ್ ಸಿಬಿ ತಂಡದ ಪರಿಸ್ಥಿತಿಯೂ ಅದೇ ರೀತಿ ಆಗಿದೆ. ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಪರಿಸ್ಥಿತಿಯೂ ಅದೇ ರೀತಿ ಆಗಬಹುದು. ಅದು ಬೇರೆ ಮಾತು.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಲ್ಲಿ ಬೇರೆ ಬೇರೆ ಬಣಗಳಿರುತ್ತವೆ. ಮೂಲ ಕಾಂಗ್ರೆಸ್ ಅಥವಾ ಮೂಲ ಬಿಜೆಪಿ ಬಣದವರು, ವಲಸಿಗರು, ಪ್ರಭಾವಿ ನಾಯಕರು.. ಹೀಗೆ ಕನಿಷ್ಠ ಐದಾರು ಗುಂಪುಗಳಿರುತ್ತವೆ.
ಅದೇ ರೀತಿ ಆರ್ ಸಿಬಿ ತಂಡದಲ್ಲೂ ಇದೆ. ಮೂಲ ಆರ್ ಸಿಬಿ ಆಟಗಾರರು. ಖರೀದಿ ಮಾಡಿದ ಭಾರತದ ಆಟಗಾರರು, ವಿದೇಶಿ ಆಟಗಾರರು ಹೀಗೆ ಕನಿಷ್ಠ ಅಂದ್ರೂ ನಾಲ್ಕೈದು ಬಣಗಳಂತೂ ಆರ್ ಸಿಬಿನಲ್ಲಿದೆ.
ಹೀಗಾಗಿಯೇ ಆರ್ ಸಿಬಿ ತಂಡಕ್ಕೆ ಇನ್ನೂ ಕೂಡ ತಂಡದ ನಾಯಕ ಯಾರು ಎಂಬುದನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ. RCB Captain IPL 2022: Royal Challengers Bangalore

ಯಾಕಂದ್ರೆ ಆರ್ ಸಿಬಿ ನಾಯಕತ್ವಕ್ಕೆ ಬ್ರ್ಯಾಂಡ್ ಬೇಕಾಗಿದೆ. ರಾಜಕೀಯ ಪಕ್ಷಗಳಲ್ಲಿ ಜಾತಿವಾರು ನಾಯಕರು, ಪ್ರಭಾವಿ ನಾಯಕರು, ಮಾಸ್ ಲೀಡರ್ ಅನ್ನೋ ಲೆಕ್ಕಚಾರದಲ್ಲಿ ತಮ್ಮ ನಾಯಕರನ್ನು ಆಯ್ಕೆ ಮಾಡಲಾಗುತ್ತದೆ.
ಅದೇ ರೀತಿ ಆರ್ ಸಿಬಿ ತಂಡದ ಪರಿಸ್ಥಿತಿ ಭಿನ್ನವೇನೂ ಇಲ್ಲ. ವಿದೇಶಿ ಆಟಗಾರನಿಗೆ ನಾಯಕತ್ವ ನೀಡಬೇಕೋ ಅಥವಾ ಭಾರತೀಯ ಆಟಗಾರನಿಗೆ ನಾಯಕತ್ವ ನೀಡಬೇಕೋ ಅಥವಾ ಮೂಲ ಆರ್ ಸಿಬಿ ಆಟಗಾರನಿಗೆ ನಾಯಕತ್ವ ನೀಡಬೇಕೋ.. ಅಥವಾ ಪ್ರಭಾವಿ ಆಟಗಾರನಿಗೆ ನಾಯಕತ್ವ ನೀಡಬೇಕೋ ಅಥವಾ ಯುವ ಆಟಗಾರನಿಗೆ ನಾಯಕತ್ವ ನೀಡಬೇಕೋ ಅನ್ನೋ ಗೊಂದಲದಲ್ಲಿದೆ ಆರ್ ಸಿಬಿ ಹೈಕಮಾಂಡ್. ಹೀಗಾಗಿಯೇ ಆರ್ ಸಿಬಿ ನಾಯಕ ಯಾರು ಎಂಬುದನ್ನು ಘೋಷಣೆ ಮಾಡಿಲ್ಲ.
ಹಾಗೇ ಸಮ್ಮಿಶ್ರ ಸರ್ಕಾರದಂತೆ ಮೊದಲಾರ್ಧದ ಟೂರ್ನಿಗೆ ಒಬ್ಬ ನಾಯಕ, ದ್ವಿತಿಯಾರ್ಧಕ್ಕೆ ಇನ್ನೊಬ್ಬ ನಾಯಕನನ್ನು ಆಯ್ಕೆ ಮಾಡಿದ್ರೂ ಅಚ್ಚರಿ ಏನಿಲ್ಲ.
ಒಟ್ಟಿನಲ್ಲಿ ಆರ್ ಸಿಬಿ ಹೈಕಮಾಂಡ್ ನ ಗೇಮ್ ಪ್ಲಾನ್ ಏನು ಎಂಬುದೇ ಗೊತ್ತಾಗುತ್ತಿಲ್ಲ. ಅಭಿಮಾನಿಗಳಲ್ಲಿ ಪ್ರತಿ ದಿನ ಕುತೂಹಲ ಮೂಡಿಸುವಂತೆ ಮಾಡುತ್ತಿದೆ.