ಅಫ್ಘಾನಿಸ್ತಾನ ತಂಡದ ಸ್ಪಿನ್ ಬೌಲಿಂಗ್ ಅಸ್ತ್ರವಾಗಿರುವ ರಶೀದ್ ಖಾನ್, ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ.
ಉಭಯ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಜೂ.2ರಿಂದ ಆರಂಭಗೊಳ್ಳಲಿದೆ. ಆದರೆ ಗಾಯದ ಸಮಸ್ಯೆಗೆ ಸಿಲುಕಿರುವ ರಶೀದ್ ಖಾನ್, ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ. ರಶೀದ್ ಖಾನ್ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ತಂಡದ ಆಟಗಾರರಾದ ಮೊಹಮ್ಮದ್ ನಬಿ, ಮುಜೀಬ್ ಉರ್ ರಹಮಾನ್ ಹಾಗೂ ಯುವ ಸ್ಪಿನ್ನರ್ ನೂರ್ ಅಹ್ಮದ್ ಅವರುಗಳ ಮೇಲೆ ತಂಡದ ಬೌಲಿಂಗ್ ವಿಭಾಗದ ಜವಾಬ್ದಾರಿ ಹೆಚ್ಚಾಗಲಿದೆ.
ರಶೀದ್ ಖಾನ್ ಅವರ ಗಾಯದ ಸಮಸ್ಯೆ ಬಗ್ಗೆ ಮಾಹಿತಿ ನೀಡಿರುವ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ, ವೈದ್ಯಕೀಯ ತಂಡದ ನಿಗಾದಲ್ಲಿರುವ ರಶೀದ್ ಖಾನ್, ಜೂನ್ 7ರಂದು ನಡೆಯುವ ಅಂತಿಮ ಏಕದಿನ ಪಂದ್ಯಕ್ಕೆ ತಂಡಕ್ಕೆ ಮರಳುವುದಾಗಿ ತಿಳಿಸಿದೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಹಜ್ಮತುಲ್ಲಾ ಶಹೀದಿ ಅವರು ತಂಡವನ್ನ ಮುನ್ನಡೆಸಲಿದ್ದಾರೆ. ಉಭಯ ತಂಡಗಳ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಜೂ.2ರಂದು ನಡೆಯಲಿದ್ದು, ಎರಡನೇ ಪಂದ್ಯ ಜೂ.4ರಂದು ಹಾಗೂ ಅಂತಿಮ ಪಂದ್ಯ ಜೂ.7ರಂದು ನಡೆಯಲಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ 2023ರ ಸರಣಿಯಲ್ಲಿ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್, ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ದೊಡ್ಡ ಸಕ್ಸಸ್ ಕಂಡಿದ್ದರು. ಗುಜರಾತ್ ಟೈಟನ್ಸ್ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದ 24 ವರ್ಷದ ರಶೀದ್, 17 ಪಂದ್ಯಗಳಲ್ಲಿ 8.24ರ ಎಕಾನಮಿಯಲ್ಲಿ 27 ವಿಕೆಟ್ಗಳನ್ನ ಪಡೆದಿದ್ದರು. ಅಲ್ಲದೇ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದರು.
Rashid Khan, Afghanistan, IPL 2023, Gujrat Titans, ODI Series, Sri Lanka, Sports Karnataka