ಭರವಸೆಯ ಆಟಗಾರ ಕರುಣ್ ನಾಯರ್ ಬಾರಿಸಿದ (ಅಜೇಯ 152) ಭರ್ಜರಿ ಶತಕದ ಬಲದಿಂದ ಕರ್ನಾಟಕ ಚೆನ್ನೈನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಎಲೈಟ್ ಸಿ ಗುಂಪಿನ ಪಂದ್ಯದಲ್ಲಿ ಜಮ್ಮು ಕಾಶ್ಮಿರ್ ವಿರುದ್ಧ ದಿನದಾಟದ ಅಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 268 ರನ್ ಕಲೆ ಹಾಕಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕದ ಆರಂಭ ಕಳಪೆಯಾಗಿತ್ತು. ದೇವದತ್ ಪಡೀಕ್ಕಲ್ 8 ರನ್ ಸೇರಿಸಿ ನಿರಾಸೆ ಅನುಭವಿಸಿದರು. 10 ರನ್ ಗಳಿಗೆ ಒಂದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ರವಿ ಕುಮಾರ್ ಸಮರ್ಥ್ ಹಾಗೂ ಕರುಣ್ ನಾಯರ್ ಜೋಡಿ ಸೊಗಸಾದ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ನೆರವಾದರು. ಈ ಜೋಡಿ ಉತ್ತಮ ಆಟದ ಪ್ರದರ್ಶನ ನೀಡಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿತು.
ಕರುಣ್-ಸಮರ್ಥ್ ಜೋಡಿ ಸೂಮಾರು 28 ಓವರ್ ಗಳ ವರೆಗೆ ಬ್ಯಾಟ್ ಮಾಡಿ 98 ರನ್ ಗಳನ್ನು ಕಲೆ ಹಾಕಿತು. ಸಮರ್ಥ್ 45 ರನ್ ಬಾರಿಸಿದ್ದಾಗ ಅಬ್ದುಲ್ ಸಮದ್ ಎಸೆತದಲ್ಲಿ ಔಟ್ ಆದರು. ನಾಯಕ ಮನೀಷ್ ಪಾಂಡೆ (1) ರನ್ ಕಲೆ ಹಾಕುವಲ್ಲಿ ವಿಫಲರಾದರು.
ಒಂದು ತುದಿಯಲ್ಲಿ ವಿಕೆಟ್ ಗಳು ಬೀಳುತ್ತಾ ಇದ್ದರೆ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತಿದ್ದ ಕರುಣ್ ನಾಯರ್ ಸಮಯೋಚಿತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ತಮ್ಮ ಅನುಭವ ಬಳಿಸಿಕೊಂಡು ಬ್ಯಾಟ್ ಮಾಡಿದ ಕರುಣ್ ಹಂತ ಹಂತವಾಗಿ ಇನ್ನಿಂಗ್ಸ್ ಕಟ್ಟುತ್ತಾ ಸಾಗಿದರು. ಇವರನ್ನು ಕಟ್ಟಿ ಹಾಕಲು ಜಮ್ಮು ತಂಡದ ಬೌಲರ್ ಗಳು ವಿಫಲರಾದರು. ಇವರು ದಿನದಾಟದಂತ್ಯಕ್ಕೆ ಇವರು 152 ರನ್ ಸೇರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇವರ ಇನ್ನಿಂಗ್ಸ್ ನಲ್ಲಿ 21 ಬೌಂಡರಿ, ಒಂದು ಸಿಕ್ಸರ್ ಸೇರಿವೆ.
ಕೆಳ ಕ್ರಮಾಂಕದಲ್ಲಿ ರೋನಿತ್ ಮೋರೆ 23 ರನ್ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು. ಜಮ್ಮು ಪರ ಮುಜ್ತಾಬ್ ಯೂಸುಫ್, ಉಮ್ರಾನ್ ಮಲಿಕ್, ಪರ್ವೆಜ್ ರಸೂಲ್ ತಲಾ ಎರಡು ವಿಕೆಟ್ ಪಡೆದರು.