ಭಾರತ(Team India) ಯುವ ಆಟಗಾರ ಪೃಥ್ವಿ ಶಾ(Prithvi Shaw) ರಣಜಿ ಟ್ರೋಫಿ ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಅಸ್ಸಾಂ(Assam) ವಿರುದ್ಧದ ಪಂದ್ಯದಲ್ಲಿ ಮ್ಯಾರಥಾನ್ ಇನ್ನಿಂಗ್ಸ್(Marathon Innings) ಆಡಿದ ಆರಂಭಿಕ ಬ್ಯಾಟ್ಸ್ಮನ್ ವೈಯಕ್ತಿಕ 379 ರನ್ಗಳಿಸುವ ಮೂಲಕ ರಣಜಿ ಟ್ರೋಫಿ ಇತಿಹಾಸದಲ್ಲೇ 2ನೇ ವೈಯಕ್ತಿಕ ಗರಿಷ್ಠ ಸ್ಕೋರ್ ಗಳಿಸಿದ ಹೆಗ್ಗಳಿಕೆ ಪಡೆದಿದ್ದಾರೆ.
ಗುವಾಹಟಿಯಲ್ಲಿ ಅಸ್ಸಾಂ ವಿರುದ್ದ ನಡೆಯುತ್ತಿರುವ ಪಂದ್ಯದ ಮೊದಲ ದಿನವೇ ಪೃಥ್ವಿ ಶಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಮೊದಲ ದಿನದ ಅಂತ್ಯಕ್ಕೆ 240 ರನ್ಗಳಿಸಿ ಅಜೇಯರಾಗಿ ಉಳಿದಿದ್ದ ಪೃಥ್ವಿ ಶಾ, ಎರಡನೇ ದಿನವೂ ರನ್ ಹೊಳೆ ಹರಿಸಿದರು. ಅಸ್ಸಾಂ ಬೌಲಿಂಗ್ ದಾಳಿಯನ್ನ ಧೂಳಿಪಟ ಮಾಡಿದ ಡ್ಯಾಶಿಂಗ್ ಓಪನರ್, 383 ಬಾಲ್ಗಳಲ್ಲಿ 379 ರನ್ಗಳಿಸಿ ರಿಯಾನ್ ಪರಾಗ್ಗೆ ವಿಕೆಟ್ ಒಪ್ಪಿಸಿದರು. ಪೃಥ್ವಿ ಶಾ ಅವರ ಇನ್ನಿಂಗ್ಸ್ನಲ್ಲಿ ಒಟ್ಟು 49 ಬೌಂಡರಿ ಹಾಗೂ 4 ಸಿಕ್ಸರ್ ಒಳಗೊಂಡಿತು.
ಅಸ್ಸಾಂ ವಿರುದ್ಧ ಮ್ಯಾರಥಾನ್ ಇನ್ನಿಂಗ್ಸ್ ಆಡುವ ಮೂಲಕ ವೈಯಕ್ತಿಕ 379 ರನ್ ಕಲೆಹಾಕಿದ ಪೃಥ್ವಿ ಶಾ, ರಣಜಿ ಟ್ರೋಫಿ ಕ್ರಿಕೆಟ್ನಲ್ಲಿ 2ನೇ ವೈಯಕ್ತಿಕ ಸ್ಕೋರ್ಗಳಿಸಿದ ಹೆಗ್ಗಳಿಕೆ ಪಡೆದರು. ರಣಜಿ ಟ್ರೋಫಿಯಲ್ಲಿ ಈ ಹಿಂದೆ ಬಿ.ಬಿ. ನಿಂಬಾಳ್ಕರ್(443*) ರನ್ಗಳಿಸಿರುವುದು ಈವರೆಗೂ ದಾಖಲಾಗಿರುವ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ. ತಮ್ಮ ಈ ಅಮೋಘ ಬ್ಯಾಟಿಂಗ್ ಮೂಲಕ ಪೃಥ್ವಿ ಶಾ, ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 300 ರನ್, ಲಿಸ್ಟ್ ಎ ಕ್ರಿಕೆಟ್ನಲ್ಲಿ 200 ರನ್ ಹಾಗೂ ಟಿ20ಯಲ್ಲಿ 100 ರನ್ಗಳಿಸಿರುವ ಮೊದಲ ಆಟಗಾರ ಎನಿಸಿದರು.
ಪೃಥ್ವಿ ಶಾ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಮುಂಬೈ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 138.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 687 ರನ್ಗಳ ಬೃಹತ್ ಮೊತ್ತ ಕಲೆಹಾಕಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಆರಂಭಿಕ ಬ್ಯಾಟ್ಸ್ಮನ್ ಪೃಥ್ವಿ ಶಾ ಅವರಿಗೆ ಉತ್ತಮ ಸಾಥ್ ನೀಡಿದ ಮುಂಬೈ ತಂಡದ ನಾಯಕ ಅಜಿಂಕ್ಯಾ ರಹಾನೆ(191) ರನ್ಗಳಿಗೆ ಔಟಾಗಿ ದ್ವಿಶತಕ ವಂಚಿತರಾದರು.
ರಣಜಿ ಟ್ರೋಫಿಯಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್:
ಬಿಬಿ ನಿಂಬಾಳ್ಕರ್ – 443* ರನ್
ಪೃಥ್ವಿ ಶಾ – 379 ರನ್
ಸಂಜಯ್ ಮಂಜ್ರೇಕರ್ – 377 ರನ್
ಎಂವಿ ಶ್ರೀಧರ್ – 366 ರನ್
ಸಮಿತ್ ಘೋಯಲ್ – 359* ರನ್