ಮಾಜಿ ರಣಜಿ ಚಾಂಪಿಯನ್ ಕರ್ನಾಟಕ, ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಎಲೈಟ್ `ಸಿ’ ಗುಂಪಿನ ತನ್ನ ಎರಡನೇ ಲೀಗ್ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಭರ್ಜರಿ ಗೆಲುವಿನ ಕನಸು ಕಾಣುತ್ತಿದೆ. ಕೊನೆಯ ದಿನದಾಟದಲ್ಲಿ ಮನೀಷ್ ಪಡೆ ಎದುರಾಳಿ ತಂಡದ ಆರು ವಿಕೆಟ್ ಪಡೆದರೆ, ಜಯ ಲಭಿಸುತ್ತದೆ.
ಜಯ ಗಳಿಸಲು ಎರಡನೇ ಇನ್ನಿಂಗ್ಸ್‌ನಲ್ಲಿ 508 ರನ್ ಸೇರಿಸುವ ಗುರಿ ಪಡೆದಿರುವ ಜಮ್ಮು ಮತ್ತು ಕಾಶ್ಮೀರ ತಂಡ, ಮೂರನೇ ದಿನದ ಅಂತ್ಯದಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 190 ರನ್ ಮಾಡಿದೆ. ಜಮ್ಮು ಜಯ ಸಾಧಿಸಲು 316 ರನ್ ಸೇರಿಸುವ ಕಠಿಣ ಸವಾಲು ಎದುರಿಸಿದೆ.
ಎರಡನೇ ಇನ್ನಿಂಗ್ಸ್ ಜಮ್ಮು ಮತ್ತು ಕಾಶ್ಮೀರ್ ತಂಡ, 57 ರನ್ ಸೇರಿಸುವಷ್ಟರಲ್ಲಿ ಮೂರು ಪ್ರಮುಖ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು.
ಆದರೆ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ಫಾಜಿಲ್ ರಶೀದ್ ಹಾಗೂ ನಾಯಕ ಲನ್ ದೇವ್ ಸಿಂಗ್ ಜೋಡಿ 79 ರನ್ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಆಗ ಫಾಜಿಲ್ ರಶೀದ್ 65 ರನ್ ಮಾಡಿ ಶ್ರೇಯಸ್ ಗೋಪಾಲ್ ಬೌಲಿಂಗ್ ನಲ್ಲಿ ಔಟ್ ಆದರು. ದಿನದ ಅಂತ್ಯದಲ್ಲಿ ಲನ್ ದೇವ್ ಸಿಂಗ್ 65 ಹಾಗೂ ಅಬ್ದುಲ್ ಸಮದ್ 21 ರನ್‌ಗಳೊಂದಿಗೆ ಬ್ಯಾಟ್ ಮಾಡುತ್ತಿದ್ದರು.
ಕರ್ನಾಟಕದ ಪರ ಶ್ರೇಯಸ್ ಗೋಪಾಲ್ 90 ಕ್ಕೆ ಮೂರು ಹಾಗೂ ಪ್ರಸಿದ್ಧ ಕೃಷ್ಣ 70 ಕ್ಕೆ ಒಂದು ವಿಕೆಟ್ ಉರುಳಿಸಿದರು.
ಇದಕ್ಕೂ ಮುನ್ನ ಎರಡನೇ ದಿನದ ಅಂತ್ಯದಲ್ಲಿ ಎರಡು ವಿಕೆಟ್ ನಷ್ಟಕ್ಕೆ 128 ರನ್ ಮಾಡಿದ್ದ ಕರ್ನಾಟಕ, ಮೂರನೇ ದಿನದ ಬೆಳಿಗ್ಗೆ ಆಟ ಮುಂದುವರಿಸಿ ಮೂರು ವಿಕೆಟ್ ನಷ್ಟಕ್ಕೆ 298 ರನ್ ಮಾಡಿ ತನ್ನ ಎರಡನೇ ಇನ್ನಿಂಗ್ಸ್ ಬಿಟ್ಟುಕೊಟ್ಟತು.
ಕೆ.ಸಿ.ಸಿದ್ಧಾರ್ಥ, ಮಿಂಚಿನ 72 ರನ್ ಮಾಡಿ ಅಬಿದ್ ಮುಸ್ತಾಕ್‌ಗೆ ವಿಕೆಟ್ ಒಪ್ಪಿಸಿದರು.
ಕರುಣ್ ನಾಯರ್ ಹಾಗೂ ಕೆ.ಸಿ.ಸಿದ್ಧಾರ್ಥ ಜೋಡಿ ಮೂರನೇ ವಿಕೆಟ್ ಜೊತೆಯಾಟದಲ್ಲಿ 113 ರನ್ ಸೇರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ನಾಲ್ಕನೇ ವಿಕೆಟ್‌ಗೆ ನಾಯರ್ ಹಾಗೂ ನಾಯಕ ಮನೀಷ್ ಪಾಂಡೆ ಜೋಡಿ 50 ರನ್ ಸೇರಿಸಿತು. ಕರುಣ್ ನಾಯರ್ 71 ಹಾಗೂ ನಾಯಕ ಮನೀಷ್ ಪಾಂಡೆ 37 ರನ್ ಮಾಡಿ ಅಜೇಯರಾಗಿ ಉಳಿದರು.