ಪ್ಯಾರಿಸ್ ಓಪನ್‌ನಲ್ಲಿ ಪಾಲ್ಗೊಳ್ಳಲಿರುವ ರಾಫೆಲ್ ನಡಾಲ್
ಪ್ರಸಕ್ತ ಋತುವಿನ ಅಂತ್ಯದ ಎಟಿಪಿ ಫೈನಲ್ ನಲ್ಲಿ ಪಾಲ್ಗೊಳ್ಳುವ ಮುನ್ನ ಅನುಭವಿ ಆಟಗಾರ ರಾಫೆಲ್ ನಡಾಲ್ ಅವರು ಮುಂದಿನ ವಾರ ಆರಂಭವಾಗಲಿರುವ ಪ್ಯಾರಿಸ್ ಓಪನ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ಅವರ ಕೋಚ್ ಕಾರ್ಲೋಸ್ ಮೋಯಾ ಹೇಳಿದ್ದಾರೆ.
ಪ್ರಸಕ್ತ ವರ್ಷದ ಫ್ರೆಂಚ್ ಓಪನ್‌ನಲ್ಲಿ ಪಾದದ ನೋವಿನಲ್ಲಿಯೇ ಆಡಿದ ಹದಿನಾಲ್ಕನೇ ಬಾರಿ ಫ್ರೆಂಚ್ ಓಪನ್ ಕಿರೀಟ ಎತ್ತಿ ಹಿಡಿದ ನಡಾಲ್, ಸಧ್ಯ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಅವರು ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಿಂದ ರಾಫೆಲ್ ನಡಾಲ್ ಹೊರಗುಳಿಯಬೇಕಾಯಿತು.

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಯು.ಎಸ್.ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಫ್ರಾನ್ಸಿಸ್ ಟಿಯಾಫೊ ಕೈಯಲ್ಲಿ ಸೋಲಿನ ಕಹಿ ಅನುಭವಿಸಿದ್ದರು. ಸ್ಪೇನ್ ಆಟಗಾರ ರಾಫೆಲ್ ನಡಾಲ್, ಈ ವರೆಗೆ ಒಟ್ಟು 22 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು ತಮ್ಮ ಮಡಿಲಿಗೆ ಹಾಕಿಕೊಂಡಿದ್ದು, ಇದೊಂದು ದಾಖಲೆ ಎನಿಸಿದೆ.
ರಾಫೆಲ್ ನಡಾಲ್ ಅವರ ಪತ್ನಿ ಮೇರಿ ಪೆರೆಲ್ಲೊ ಅವರಿಗೆ ಕಳೆದ ದಿ 8 ರಂದು ಹೆರಿಗೆಯಾಗಿದ್ದು, ಮೊದಲ ಮಗುವಿನ ಜನನದ ಹಿನ್ನೆಲೆಯಲ್ಲಿ ಕೂಡ ಅವರು ಕೆಲ ದಿನ ಪತ್ನಿಯೊಂದಿಗೆ ಕಳೆಯಬೇಕಿದ್ದರಿಂದ ಕೆಲ ಕಾಲ ಟೆನಿಸ್‌ನಿಂದ ದೂರ ಉಳಿದಿದ್ದರು.

ಎಟಿಪಿ ಟೂರ್ ಫೈನಲ್ಸ್ ನವೆಂಬರ್ 13 ರಿಂದ 20 ರ ವರೆಗೆ ನಡೆಯಲಿದೆ. ನಡಾಲ್ ಈ ವರೆಗೆ ಒಂದೂ ಬಾರಿ ಕೂಡ ಎಟಿಪಿ ಫೈನಲ್ ಪ್ರಶಸ್ತಿ ಪಡೆದಿಲ್ಲ.
Rafael Nadal, Paris Open, Tennis, ATP Finals