ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಭಾರತದ ಪಿ.ವಿ ಸಿಂಧು ಅವರು ಬಾಸೆಲ್ ನಲ್ಲಿ ನಡೆದ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ. ಈ ಮೂಲಕ ಈ ವಿಭಾಗದಲ್ಲಿ ಭಾರತ ದಶಕಗಳ ಬಳಿಕ ಪ್ರಶಸ್ತಿ ಗೆದ್ದಿದೆ. ಎಚ್.ಎಸ್.ಪ್ರಣಯ್ ಪುರುಷರ ವಿಭಾಗದ ಸಿಂಗಲ್ಸ್ ನ ಫೈನಲ್ ಪಂದ್ಯದಲ್ಲಿ ತೀವ್ರ ಸೆಣಸಾಟದ ನಂತರ ಸೋತು ರನ್ನರ್ ಅಪ್‌ಗೆ ತೃಪ್ತಿಪಟ್ಟರು.
ಮಹಿಳಾ ವಿಭಾಗದ ಸಿಂಗಲ್ಸ್ ನ ಅಂತಿಮ ಪಂದ್ಯದಲ್ಲಿ ಪಿ.ವಿ.ಸಿಂಧು 21-16, 21-8 ರಿಂದ ನಾಲ್ಕನೇ ಶ್ರೇಯಾಂಕದ ಥೈಲ್ಯಾಂಡಿನ ಬುಸಾನನ್ ಒಂಗ್ಬಮ್ರುಂಗ್ಪನ್ ಅವರನ್ನು ಎರಡು ನೇರ ಸೆಟ್‌ಗಳ 49 ನಿಮಿಷಗಳ ಆಟದಲ್ಲಿ ಸೋಲಿಸಿ ಪ್ರಶಸ್ತಿ ಬಾಚಿಕೊಂಡರು.
ಮೊದಲ ಗೇಮ್‌ನಲ್ಲಿ ಆರಂಭದಲ್ಲಿ ಎದುರಾಳಿಯಿಂದ ತಕ್ಕ ಮಟ್ಟಿನ ಪ್ರತಿರೋಧ ಎದುರಿಸಿದ ಸಿಂಧು, ಅಂತಿಮವಾಗಿ 21-16 ರಿಂದ ಗೆದ್ದು 1-0 ರ ಮುನ್ನಡೆಯೊಂದಿಗೆ ಎರಡನೇ ಗೇಮ್ ಆಡಲು ಸಜ್ಜಾದರು. ಎರಡನೇ ಗೇಮ್‌ನಲ್ಲಿ ಆರಂಭದಿಂದಲೇ ಮೇಲುಗೈ ಸಾಧಿಸಿದ ಸ್ಟಾರ್ ಆಟಗಾರ್ತಿ ಹೆಚ್ಚಿನ ಪರಿಶ್ರಮವಿಲ್ಲದೇ ಗೇಮ್ ಅನ್ನು 21-8 ರಿಂದ ಗೆದ್ದು ಪ್ರತಿಷ್ಠಿತ ಪ್ರಶಸ್ತಿಯನ್ನು ತಮ್ಮ ಮಡಿಲಿಗೆ ಹಾಕಿಕೊಂಡು ಹಿರಿಮೆ ಮೆರೆದರು.
ಸಿಂಧು ಹಾಗೂ ಬುಸಾನನ್ ಒಂಗ್ಬಮ್ರುಂಗ್ಪನ್ ಒಟ್ಟು ಹದಿನೇಳು ಬಾರಿ ಪರಸ್ಪರ ಎದುರಾಳಿಗಳಾಗಿದ್ದು, ಈ ಪೈಕಿ ಸಿಂಧು ಹದಿನಾರು ಬಾರಿ ಜಯ ಕಂಡಿದ್ದಾರೆ. ಸೈನಾ ನೆಹ್ವಾಲ್ ಅವರು 2011 ಹಾಗೂ 2012 ರಲ್ಲಿ ಈ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದರು.
ಹೋರಾಡಿ ಸೋತ ಪ್ರಣಯ್
ಪುರುಷರ ವಿಭಾಗದ ಸಿಂಗಲ್ಸ್ ನ ಫೈನಲ್ ಪಂದ್ಯದಲ್ಲಿ ಇಂಡೋನೇಷ್ಯಾದ ಜೊನಾಟನ್ ಕ್ರಿಸ್ಟ್ ಕೈಯಲ್ಲಿ ಎಂಟನೇ ಶ್ರೇಯಾಂಕದ ಎಚ್.ಎಸ್.ಪ್ರಣಯ್ 12-21, 18-21 ರಿಂದ 48 ನಿಮಿಷಗಳ ಆಟದಲ್ಲಿ ಸೋಲು ಅನುಭವಿಸಿ ರನ್ನರ್ ಅಪ್ ಪ್ರಶಸ್ತಿ ಪಡೆದರು.