ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರು ಇಂಡಿಯನ್ ಓಪನ್ ಟೂರ್ನಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ.
ನವದೆಹಲಿಯಲ್ಲಿ ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಎರಡು ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು 21-7, 21-18 ರಿಂದ ಭಾರತದ ಅಶ್ಮಿತಾ ಚಾಲಿಹಾ ಅವರನ್ನು 36 ನಿಮಿಷಗಳ ಕಾದಾಟದಲ್ಲಿ ಮಣಿಸಿದರು. ಅಮೋಘ ಪ್ರದರ್ಶನ ನೀಡಿದ ಸಿಂಧು ಏಕ ಪಕ್ಷೀಯ ಪಂದ್ಯದಲ್ಲಿ ಸೊಗಸಾದ ಜಯ ಸಾಧಿಸಿದರು.
ಇನ್ನು ಎರಡನೇ ಸುತ್ತಿನ ಪಂದ್ಯದಲ್ಲಿ ಸೈನಾ ನೆಹ್ವಾಲ್ ಅವರನ್ನು ಮಣಿಸಿದ್ದ ಭಾರತದ ಯುವ ಆಟಗಾರ್ತಿ ಮಾಳ್ವಿಕಾ ಬನ್ಸೊದ್ ಆಟಕ್ಕೆ ಬ್ರೇಕ್ ಬಿದ್ದಿತು. ಇವರು ನಮ್ಮದೇ ದೇಶದ ಆಕರ್ಷಿ ಕಶ್ಯಪ್ ವಿರುದ್ಧ ಸ್ಥಿರ ಆಟದ ಪ್ರದರ್ಶನ ನೀಡುವಲ್ಲಿ ಎಡವಿದರು. ಆಕರ್ಷಿ ಕಶ್ಯಪ್ 21-12, 21-15 ರಿಂದ ಜಯ ಸಾಧಿಸಿದರು.
ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಲಕ್ಷ್ಯ ಸೇನ್ 14-21, 21-9, 21-14 ರಿಂದ ಎಚ್.ಎಸ್ ಪ್ರಣಯ್ ಅವರಿಗೆ ಖೆಡ್ಡಾ ತೋಡಿದರು. ಇವರು ಒಂದು ಗಂಟೆಯ ಆಟದಲ್ಲಿ ಜಯ ಸಾಧಿಸಿ ಮುನ್ನಡೆದರು.
ಉಳಿದಂತೆ ಪುರುಷರ ಡಬಲ್ಸ್ ನಲ್ಲಿ ಸಾತ್ವಿಕ್ ಸಾಯ್ ರಾಜ್ ರಾಂಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಮಹಿಳಾ ವಿಭಾಗದಲ್ಲಿ ಆಶನ್ ರಾಯ್, ಹರಿತಾ ಜಯದ ನಗೆ ಬೀರಿದರು.