ಐಪಿಎಲ್ 15ನೇ ಆವೃತ್ತಿಯಲ್ಲಿ ಈಗ ಕೊರೊನಾದ ಮಾತು ಜೋರಾಗಿದೆ. ಲೀಗ್ ಹಂತದ ಪಂದ್ಯಗಳು ರೋಚಕತೆ ಹೆಚ್ಚಿಸುತ್ತಿರುವ ಈ ಸಮಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಂಪ್ ನಲ್ಲಿ ವಕ್ಕರಿಸಿದ ಕೊರೊನಾ ಈಗ ಐಪಿಎಲ್ ನಲ್ಲಿ ಅತಂತ್ರವನ್ನು ಸೃಷ್ಟಿಸಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಬುಧವಾರ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪಂದ್ಯ ನಡೆಯಬೇಕು. ಡೆಲ್ಲಿ ಕ್ಯಾಂಪ್ ನಲ್ಲಿ ಕೊರೊನಾ ಭೀತಿ ಹೆಚ್ಚಾಗಿರುವುದರಿಂದ ಪುಣೆಯಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಮುಂಬೈನ ಬ್ರೆಬೋರ್ನ್ ಕ್ರೀಡಾಂಗಣಕ್ಕೆ ಶಿಫ್ಟ್ ಮಾಡಲಾಗಿದೆ. ಆದರೆ ನಾಳೆ ಬೆಳಗ್ಗೆ ನಡೆಯುವ ಆರ್ ಟಿ ಪಿಸಿಆರ್ ಟೆಸ್ಟ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರು ನೆಗೆಟಿವ್ ಬಂದರೆ ಮಾತ್ರ ಪಂದ್ಯ ನಡೆಯಲಿದೆ. ಒಂದು ವೇಳೆ ಈ ಪಂದ್ಯ ನಡೆಯದೇ ಇದ್ದರೆ ಟೆಕ್ನಿಕಲ್ ಕಮಿಟಿ ರಿ ಶೆಡ್ಯೂಲ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ಫಿಸಿಯೋ ಥೆರಪಿಸ್ಟ್ ಪ್ಯಾಟ್ರಿಕ್ ಫರ್ಹಾತ್, ಮಸಾಜ್ ಥೆರಪಿಸ್ಟ್ ಚೇತನ್ ಕುಮಾರ್, ಆಟಗಾರ ಮಿಚೆಲ್ ಮಾರ್ಷ್, ಟೀಮ್ ಡಾಕ್ಟರ್ ಆಭಿಜಿತ್ ಸೆಲ್ವಿ ಮತ್ತು ಸೋಶಿಯಲ್ ಮೀಡಿಯಾ ಕಂಟೆಂಟ್ ಟೀಮ್ ಮೆಂಬರ್ ಆಕಾಶ್ ಮಾನೆ ಕೋವಿಡ್ ಪಾಸಿಟಿವ್ ಆಗಿದ್ದಾರೆ ಎಂದು ತಿಳಿದು ಬಂದಿದೆ.