ಎಂಟನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯ 130ನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ 37-30 ರಿಂದ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡವನ್ನು ಮಣಿಸಿ ಅಬ್ಬರಿಸಿದೆ.
ಈ ಗೆಲುವಿನ ಮೂಲಕ ಪುಣೇರಿ ಆಡಿದ 21 ಪಂದ್ಯಗಳಲ್ಲಿ 11 ಜಯ, 9 ಸೋಲು, 1 ಡ್ರಾ ಸಾಧಿಸಿದ್ದು 62 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ. ಇನ್ನು ಜೈಪುರ್ ಈ ಪಂದ್ಯದಲ್ಲಿ ಸೋಲು ಕಂಡಿದ್ದು, ಒಟ್ಟಾರೆ ಟೂರ್ನಿಯಲ್ಲಿ ಒಂಬತ್ತನೇ ಸೋಲು ಕಂಡಿದೆ. ಅಲ್ಲದೆ 62 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ.
ಪುಣೇರಿ ಪರ ಮೋಹಿತ್ ಗೋಯಟ್ 17 ಬಾರಿ ಎದುರಾಳಿ ಕೋರ್ಟ್ ಗೆ ಎಂಟ್ರಿ ನೀಡಿ 14 ಅಂಕಗಳನ್ನು ಕಲೆ ಹಾಕಿತು. ಇದರಲ್ಲಿ 9 ಟಚ್ ಪಾಯಿಂಟ್ ಹಾಗೂ 5 ಟ್ಯಾಕಲ್ ಪಾಯಿಂಟ್ ಸೇರಿವೆ. ಇನ್ನೋರ್ವ ಖ್ಯಾತ ಆಟಗಾರ ಅಸ್ಲಂ ಇನ್ಮಾಂದಾರ್ 21 ಬಾರಿ ಅಂಕಗಳಿಸುವ ಪ್ರಯತ್ನ ಪಟ್ಟು 11ರಲ್ಲಿ ಯಶ ಕಂಡರು. ಇನ್ನು ಜೈಪುರ್ ಪರ ಅರ್ಜುನ್ ದೇಶ್ವಾಲ್ 18 ಅಂಕ ಸೇರಿಸಿ ಸೋಲಿನಲ್ಲಿ ಮಿಂಚಿದರು.
ಒಟ್ಟಾರೆ ಪಂದ್ಯದಲ್ಲಿ ಜೈಪುರ್ 42 ಬಾರಿ ದಾಳಿ ನಡೆಸಿ 15 ಅಂಕ ಸೇರಿಸಿತು. ಇಷ್ಟೇ ದಾಳಿಯಲ್ಲಿ ಪುಣೇರಿ 17 ಅಂಕ ಪೇರಿಸಿತು. ಪುಣೇರಿ ಎದುರಾಳಿ ರೈಡರ್ ನನ್ನು 24 ಬಾರಿ ಪ್ರಯತ್ನಿಸಿ 10ರಲ್ಲಿ ಯಶ ಕಂಡಿತು. ಇದರಲ್ಲಿ ಒಂದು ಸೂಪರ್ ರೇಡ್ ಸಹ ಸೇರಿದೆ.