ಕಳೆದ ಹಲವು ವರ್ಷಗಳಿಂದ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದ ಚೇತೇಶ್ವರ್ ಪೂಜಾರ ಕೊನೆಗೂ ಮೂರಂಕಿ ಮೊತ್ತವನ್ನು ಮುಟ್ಟಿ ಸಂಭ್ರಮಿಸಿದರು. ಆಂಗ್ಲರ ನಾಡಿನಲ್ಲಿ ಬಾರಿಸಿದ ಶತಕ, ಭಾರತದ ಮುಂಬೈ ವರೆಗೂ ಪ್ರತಿಧ್ವನಿಸುತ್ತಿದೆ.
ಕಳಪೆ ಫಾರ್ಮ್ ಕಾರಣಕ್ಕಾಗಿ ಟೆಸ್ಟ್ ಸ್ಪೇಷಲಿಸ್ಟ್ ಬ್ಯಾಟ್ಸ್ ಮನ್ ಅವರನ್ನು ಶ್ರೀಲಂಕಾ ವಿರುದ್ಧದ ಸರಣಿಯಿಂದ ಹೊರ ಇಡಲಾಗಿತ್ತು. ಅಲ್ಲದೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಆಟಗಾರರಿಗೆ ನೀವು ತಂಡಕ್ಕೆ ಮತ್ತೆ ಮರಳಬೇಕಾದಾರೆ, ದೇಶಿಯ ಟೂರ್ನಿಗಳಲ್ಲಿ ರನ್ ಬಾರಿಸಿ ಎಂದು ಸೂಚನೆ ನೀಡಿದ್ದರು. ಇದರಂತೆ ಸೌರಾಷ್ಟ್ರ ತಂಡದ ಪರ ಚೇತೇಶ್ವರ್ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು.
ಭಾರತದಲ್ಲಿ ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುತ್ತಿದೆ. ಚೇತೇಶ್ವರ್ ಪೂಜಾರ ಈಗ ಇಂಗ್ಲೆಂಡ್ ನಲ್ಲಿ ಕೌಂಟಿ ಕ್ರಿಕೆಟ್ ಆಡುವತ್ತ ಮುಖ ಮಾಡಿದ್ದಾರೆ. ಅಲ್ಲದೆ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ತಯಾರಿ ನಡೆಸುವ ಇರಾದೆ ಪೂಜಾರ ಅವರದ್ದಾಗಿದ್ದೆ.
ಚೇತೇಶ್ವರ್ ಪೂಜಾರ ತಮ್ಮ ಕೌಂಟಿ ಕ್ರಿಕೆಟ್ ಅನ್ನು ಅಬ್ಬರದಿಂದ ಆರಂಭಿಸಿದ್ದಾರೆ. ಅವರು ತಮ್ಮ ಮೊದಲ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಸಸೆಕ್ಸ್ ಪರ ಅದ್ಭುತ ಶತಕವನ್ನು ಗಳಿಸಿದರು. ಎರಡು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಅವರ ಪ್ರಥಮ ದರ್ಜೆಯಲ್ಲಿ ಮೂರಂಕಿ ಮುಟ್ಟಿದ್ದಾರೆ. ಡರ್ಬಿಶೈರ್ ವಿರುದ್ಧದ ಪಂದ್ಯದಲ್ಲಿ, ಪೂಜಾರ 237 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿ, ಸಸೆಕ್ಸ್ ತಂಡಕ್ಕೆ ಆಸರೆಯಾದರು. ಅಲ್ಲದೆ 23 ಬೌಂಡರಿ ನೆರವಿನಿಂದ 201 ರನ್ ಬಾರಿಸಿ ಅಜೇಯರಾಗುಳಿದರು.
ಇದು ಅವರ 51ನೇ ಪ್ರಥಮ ದರ್ಜೆ ಶತಕವಾಗಿದೆ. ಸೌರಾಷ್ಟ್ರ ಪರ ಆಡುವಾಗ 2020ರಲ್ಲಿ ಕರ್ನಾಟಕ ವಿರುದ್ಧ ಕೊನೆಯ ಶತಕ ಸಿಡಿಸಿದ್ದರು. ಅಂತಾರಾಷ್ಟ್ರೀಯ ಟೆಸ್ಟ್ ಶತಕದ ಜನವರಿ 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ಬಂದಿತ್ತು.
ಕೆಲ ಸಮಯ ಅವರ ಪ್ರದರ್ಶನ ಸರಿಯಾಗಿ ಇರಲಿಲ್ಲ. ಇದರಿಂದಾಗಿ ಫೆಬ್ರವರಿಯಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಅವರಿಗೆ ಅವಕಾಶ ಸಿಗಲಿಲ್ಲ. ರಣಜಿ ಟ್ರೋಫಿಯ ಪ್ರಸಕ್ತ ಋತುವಿನಲ್ಲಿ 5 ಇನ್ನಿಂಗ್ಸ್ಗಳಲ್ಲಿ 47.75 ಸರಾಸರಿಯಲ್ಲಿ 191 ರನ್ ಗಳಿಸಿದರು. ಈ ಕಾರಣದಿಂದಾಗಿ ಅವರು ತಮ್ಮ ಬ್ಯಾಟಿಂಗ್ ಅನ್ನು ಸುಧಾರಿಸಲು ಕೌಂಟಿ ಕ್ರಿಕೆಟ್ ತೆರಳಿದರು.