ಪ್ರಸಕ್ತ ಸಾಲಿನ ಪ್ರೊ ಕಬಡ್ಡಿ ಲೀಗ್ ನ ಸೆಮಿಫೈನಲ್ಸ್ ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್, ಯು.ಪಿ ಯೋಧಾ ತಂಡಗಳು ಸೆಣಸಾಟ ನಡೆಸಲಿವೆ.
ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡವನ್ನು ಮಣಿಸಿದ ಯೋಧಾ ತಂಡ ಉಪಾಂತ್ಯ ಪ್ರವೇಶಿಸಿದೆ. ಪಾಟ್ನಾ ಆಡಿದ 22 ಪಂದ್ಯಗಳಲ್ಲಿ 16 ಜಯ ದಾಖಲಿಸಿದ್ದು 86 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದೊಂದಿಗೆ ನಾಲ್ಕರ ಘಟ್ಟ ಪ್ರವೇಶಿಸಿದೆ.
ಒಟ್ಟಾರೆ ಅಂಕಗಳಿಕೆಯಲ್ಲಿ ಯು.ಪಿ ತಂಡ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಹೊಂದಿದೆ. ಯೋಧಾ 23 ಪಂದ್ಯಗಳಿಂದ 838 ಅಂಕ ಸೇರಿಸಿದೆ. ಪಾಟ್ನಾ ಪೈರೇಟ್ಸ್ 22 ಪಂದ್ಯಗಳಲ್ಲಿ 802 ಅಂಕ ಸೇರಿಸಿದ್ದು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಸುರೇಂದ್ರ ಗಿಲ್ ಒಟ್ಟಾರೆ ಅಂಕಗಳಿಕೆಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇವರು 22 ಪಂದ್ಯದಲ್ಲಿ 197 ಅಂಕ ಸೇರಿಸಿದ್ದಾರೆ. ಇವರಿಗೆ ಸ್ಟಾರ್ ಆಟಗಾರ ಪ್ರದೀಪ್ ನರ್ವಾಲ್ 23 ಪಂದ್ಯಗಳಲ್ಲಿ 184 ಅಂಕ ತಮ್ಮದಾಗಿಸಿಕೊಂಡಿದ್ದಾರೆ. ಪಾಟ್ನಾ ಪರ ಸಚಿನ್ 21 ಪಂದ್ಯಗಳಲ್ಲಿ 164 ಅಂಕ ಪೇರಿಸಿದ್ದಾರೆ. ಇವರಿಗೆ ಮನು ಗೋಯಟ್ ಹಾಗೂ ಕರ್ನಾಟಕದ ಸ್ಟಾರ್ ಆಟಗಾರ ಪ್ರಶಾಂತ್ ಕುಮಾರ್ ರೈ ದಾಳಿಯಲ್ಲಿ ಮಿಂಚಬಲ್ಲರು.
ಪಾಟ್ನಾ ಪರ ಟ್ಯಾಕಲ್ ನಲ್ಲಿ ಮೊಹಮ್ಮದ್ರೇಜಾ ಚಿಯಾನೆಹ್ ಎದುರಾಳಿಗಳನ್ನು ಕಟ್ಟಿ ಹಾಕಬಲ್ಲರು. ಇವರು 22 ಪಂದ್ಯಗಳಲ್ಲಿ ಐದಕ್ಕೂ ಹೆಚ್ಚು ಬಾರಿ ಐದಕ್ಕೂ ಹೆಚ್ಚು ಬಾರಿ ಎದುರಾಳಿ ರೈಡರ್ ನ್ನು ಕಟ್ಟಿ ಹಾಕುವಲ್ಲಿ ಸಫಲವಾಗಿದ್ದಾರೆ. ಯು.ಪಿ ಪರ ಸುಮಿತ್, ನಿತೀಶ್ ಕುಮಾರ್ ಸಹ ರಕ್ಷಣಾ ವಿಭಾಗದಲ್ಲಿ ಅಬ್ಬರಿಸಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ.