ಎಂಟನೇ ಆವೃತ್ತಿಯ ಪ್ರೊ ಕಬಡ್ಡಿಯ ಎರಡನೇ ಎಲಿಮಿನೇಟರ್ ಪಂದ್ಯದಲ್ಲಿ ಅಬ್ಬರದ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್ ಎರಡನೇ ಸೆಮಿಫೈನಲ್ಸ್ ಪಂದ್ಯದಲ್ಲಿ ದಬಾಂಗ್ ದೆಹಲಿ ತಂಡವನ್ನು ಎದುರಿಸಲಿದೆ.
ಎರಡನೇ ಪಂದ್ಯದಲ್ಲಿ ಆರ್ಭಟಿಸಿದ ಪವನ್ ಸೆಹ್ರಾವತ್ ತಂಡ, ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದಿದೆ. ಟೂರ್ನಿಯಲ್ಲಿ ಆರಂಭದಿಂದಲೂ ಸ್ಥಿರ ಪ್ರದರ್ಶನ ನೀಡಿರುವ ದಬಾಂಗ್ ದೆಹಲಿ ತಂಡ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದು ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದು, ನೇರವಾಗಿ ಸೆಮಿಫೈನಲ್ಸ್ ಗೆ ಪ್ರವೇಶ ಪಡೆದುಕೊಂಡಿದೆ.
ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದು ಎಲ್ಲರ ಚಿತ್ತ ಕದ್ದಿದೆ. ನವೀನ್ ಕುಮಾರ್ ಹಾಗೂ ಪವನ್ ಸೆಹ್ರವಾತ್ ನಡುವಣ ಫೈಟ್ ನೋಡಲು ಅಭಿಮಾನಿಗಳು ಕಾತುರಾಗಿದ್ದಾರೆ. ಪವನ್ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದು ಎಲ್ಲರ ಗಮನ ಸೆಳಿದಿದ್ದಾರೆ. ಪವನ್ ಸೆಹ್ರಾವತ್ ದಾಳಿಯಲ್ಲಿ 23 ಪಂದ್ಯಗಳಲ್ಲಿ 286 ಅಂಕಗಳನ್ನು ಕಲೆ ಹಾಕಿದ್ದಾರೆ. ಇವರು ಒಟ್ಟಾರೆ 17 ಬಾರಿ ಹತ್ತಕ್ಕೂ ಹೆಚ್ಚು ಅಂಕ ಕಲೆ ಹಾಕಿ ಮಿಂಚಿದ್ದಾರೆ. ಪವನ್ ಅವರೊಂದಿಗೆ ದಾಳಿಯಲ್ಲಿ ಭರತ್ ಸಾಥ್ ನೀಡಬೇಕಿದೆ. ಇನ್ನು ದಬಾಂಗ್ ತಂಡದ ಪರ ನವೀನ್ ಕುಮಾರ್ ಆಡಿದ 15 ಪಂದ್ಯಗಳಲ್ಲಿ 180 ಅಂಕ ಸೇರಿಸಿದ್ದಾರೆ. ನವೀನ್ ಎಂಟನೇ ಆವೃತ್ತಿಯ ಪಂದ್ಯದಲ್ಲಿ 10ಕ್ಕೂ ಹೆಚ್ಚು ಬಾರಿ 10ಕ್ಕೂ ಅಧಿಕ ಅಂಕ ಬಾಚಿಕೊಂಡಿದ್ದಾರೆ. ಇವರಿಗೆ ವಿಜಯ್ ಉತ್ತಮ ಸಾಥ್ ನೀಡಬಲ್ಲರು.
ಬೆಂಗಳೂರು ತಂಡದ ರಕ್ಷಣಾ ವಿಭಾಗಕ್ಕೆ ಸೌರಭ್ ನಂದಲ್ ಬಲ ತುಂಬಿದ ಆಟಗಾರ. ಇವರು 23 ಪಂದ್ಯಗಳಲ್ಲಿ 65 ಬಾರಿ ಎದುರಾಳಿ ರೈಡರ್ ನ್ನು ಕಟ್ಟಿ ಹಾಕುವಲ್ಲಿ ಸಫಲರಾಗಿದ್ದಾರೆ. ಲೆಫ್ಟ್ ಕಾರ್ನರ್ ಡಿಫೆಂಡರ್ ಅಮನ್ 51 ಅಂಕ ಸೇರಿಸಿದ್ದಾರೆ. ರಕ್ಷಣಾ ವಿಭಾಗದಲ್ಲಿ ಬುಲ್ಸ್ ತಂಡ ದೆಹಲಿಗಿಂತಲೂ ಮುಂಚೂಣಿಯಲ್ಲಿ ಕಾಣುತ್ತಿದೆ. ದೆಹಲಿ ತಂಡದ ರಕ್ಷಣಾ ವಿಭಾಗಕ್ಕೆ ಮಂಜೀತ್ ಚಿಲ್ಲರ್ ಆನೆ ಬಲ. ಇವರ ಅನುಭವವನ್ನು ತಂಡಕ್ಕೆ ಧಾರೆ ಎರೆದು ಜಯದ ಮಾಲೆ ತೊಡಿಸಬಲ್ಲರು.