ಎಂಟನೇ ಆವೃತ್ತಿ ಪ್ರೋ ಕಬಡ್ಡಿ ಫೈನಲ್ ರೋಚಕತೆ ಹುಟ್ಟಿಸಿತ್ತು. ಎರಡೂ ತಂಡಗಳು ಅಂಕಗಳನ್ನು ಸುಲಭವಾಗಿ ನೀಡಲಿಲ್ಲ. ಪರಿಣಾಮ ಕೊನೆಯ ಹಂತದವರೆಗೂ ನಡೆದ ಪಂದ್ಯದಲ್ಲಿ ದಬಾಂಗ್ ದೆಹಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಈ ಮೂಲಕ ದಬಾಂಗ್ ಚೊಚ್ಚಲ ಬಾರಿಗೆ ಪ್ರಶಸ್ತಿ ಎತ್ತಿ ಸಂಭ್ರಮಿಸಿದೆ. ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ದಬಾಂಗ್ 37-36 ರಿಂದ ಪಾಟ್ನಾ ಪೈರೇಟ್ಸ್ ತಂಡವನ್ನು ಮಣಿಸಿ ಅಬ್ಬರಿಸಿತು.
ಮೊದಲಾವಧಿಯ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತಂಡ 17-15ರಿಂದ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಪಾಟ್ನಾ ಹಾಗೂ ದಬಾಂಗ್ ತಂಡಗಳು 12 ಅಂಕಗಳನ್ನು ರೈಡ್ ನಲ್ಲಿ ಕಲೆ ಹಾಕಿದವು. ಅಲ್ಲದೆ ಟ್ಯಾಕಲ್ ನಲ್ಲಿ ಎರಡೂ ತಂಡಗಳು ತಲಾ ಎರಡು ಟ್ಯಾಕಲ್ ಅಂಕಗಳನ್ನು ಗಳಿಸಿತು. ಈ ಅವಧಿಯ 11ನೇ ನಿಮಿಷದಲ್ಲಿ ದಬಾಂಗ್ ದೆಹಲಿ ತಂಡ ಒಂದು ಬಾರಿ ಆಲೌಟ್ ಆಯಿತು.
ಎರಡನೇ ಅವಧಿಯ ಆಟದಲ್ಲಿ ಭರ್ಜರಿ ಪ್ರದರ್ಶನ ನೀಡಿ ಪುಟಿದೆದ್ದ ದಬಾಂಗ್ ದೆಹಲಿ ಅಂಕಗಳಿಕೆಗೆ ಚುರುಕು ಮುಟ್ಟಿಸಿತು. ಈ ಅವಧಿಯಲ್ಲಿ ದಬಾಂಗ್, ಪಾಟ್ನಾ ತಂಡದ ರಣ ತಂತ್ರವನ್ನು ಮೆಟ್ಟಿ ನಿಂತು ಆಟವಾಡಿತು. 28ನೇ ನಿಮಿಷದಲ್ಲಿ ಪಾಟ್ನಾ ಪೈರೇಟ್ಸ್ ಆಲೌಟ್ ಆಯಿತು. ದೆಹಲಿ ತಂಡದ ಪರ 37ನೇ ನಿಮಿಷದಲ್ಲಿ ಹಾಗೂ ಇದಕ್ಕೂ ಮೊದಲು ಸೂಪರ್ ರೈಡ್ ಮಾಡಿ ಅಂಕಗಳನ್ನು ಹಿಗ್ಗಿಸಿದರು.
ಫೈನಲ್ ಪಂದ್ಯದಲ್ಲಿ ನವೀನ್ ಕುಮಾರ್ 13 ಅಂಕಗಳನ್ನು ಕಲೆ ಹಾಕಿದರು. ಆಲ್ ರೌಂಡರ್ ವಿಜಯ್ ಎರಡು ಬಾರಿ ಸೂಪರ್ ರೈಡ್ ಸೇರಿದಂತೆ 14 ಅಂಕ ಸೇರಿಸಿ ಜಯದಲ್ಲಿ ಮಿಂಚಿದರು. ಪಾಟ್ನಾ ಪರ ಸಚಿನ್ 10, ಗುಮಾನ್ ಸಿಂಗ್ 9 ಅಂಕ ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು.