ಆರಂಭಿಕ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಯು-ಮುಂಬಾ ಹಾಗೂ ದಬಾಂಗ್ ದೆಹಲಿ ತಂಡಗಳು ಪ್ರೋ ಕಬಡ್ಡಿ ಲೀಗ್ ನಲ್ಲಿ ಶುಕ್ರವಾರ ಕಾದಾಟ ನಡೆಸಲಿವೆ. ಉಭಯ ತಂಡಗಳು ಪೂರ್ಣ ಅಂಕ ಗಳಿಸಿ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಕನಸು ಕಾಣುತ್ತಿವೆ.
ಮೊದಲ ಪಂದ್ಯದಲ್ಲಿ ಎರಡೂ ತಂಡಗಳು ಗೆಲುವು ದಾಖಲಿಸಿದ್ದರಿಂದ ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಸ್ಟಾರ್ ಆಟಗಾರರನ್ನು ಹೊಂದಿರುವ ಎರಡೂ ತಂಡಗಳು ಗೆಲುವಿನ ಲೆಕ್ಕಾಚಾರವನ್ನು ಮಾಡಿಕೊಂಡಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದ ಅನುಭವ ಹೊಂದಿದ ಆಟಗಾರರು ಈ ತಂಡದಲ್ಲಿ ಇರುವದರಿಂದ ರೋಚಕತೆ ಹೆಚ್ಚಿದೆ.
ದಬಾಂಗ್ ತಂಡದ ಪರ ನವೀನ್ ಕುಮಾರ್, ಆಲ್ ರೌಂಡರ್ ವಿಜಯ್ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿವೆ. ಮೊದಲ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ಮಂಜೀತ್ ಚಿಲ್ಲರ್ ಲಯಕ್ಕೆ ಮರಳಲು ಪ್ಲಾನ್ ಮಾಡಿಕೊಂಡಿದ್ದಾರೆ.
ಬುಲ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಅಭಿಷೇಕ್ ಸಿಂಗ್ ಅವರ ಮೇಲೆ ಎಲ್ಲರು ದೃಷ್ಟಿ ನೆಟ್ಟಿದ್ದಾರೆ. ವಿ.ಅಜಿತ್, ಹರೀಂದರ್, ಆಶೀಶ್ ಸಹ ಗೆಲುವಿನಲ್ಲಿ ಶ್ರಮಿಸಬೇಕಿದೆ. ರಕ್ಷಣಾ ಆಟಗಾರರು ಎದುರಾಳಿಯನ್ನು ಕಟ್ಟಿ ಹಾಕಲು ರೂಪುರೇಷೆಗಳನ್ನು ಸಿದ್ಧ ಪಡಿಸಿಕೊಂಡಿದೆ.