ಪ್ರೊ ಕಬಡ್ಡಿ 9ನೇ ಆವೃತ್ತಿಯಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ ಸೆಮಿಫೈನಲ್ ಪ್ರವೇಶಿಸಿದೆ. ಗುರುವಾರ ಸೆಮಿಫೈನಲ್ ನಲ್ಲಿ ಜೈಪುರ ತಂಡವನ್ನು ಎದುರಿಸಲಿದೆ.
ಮುಂಬೈನಲ್ಲಿ ನಡೆದ ಮೊದಲ ಎಲಿಮಿನೇಟರ್ನಲ್ಲಿ ಹಾಲಿ ಚಾಂಪಿಯನ್ ಡೆಲ್ಲಿ ದಬಾಂಗ್ ವಿರುದ್ಧ 56-24 ಅಂಕಗಳ ಭರ್ಜರಿ ಗೆಲುವು ದಾಖಲಿಸಿತು. ಆರಂಭದಲ್ಲೆ ಸವಾರಿ ಮಾಡಿದ ಬುಲ್ಸ್ 4ನೇ ನಿಮಿಷದಲ್ಲೆ ದಬಾಂಗ್ ತಂಡವನ್ನು ಆಲೌಟ್ ಮಾಡಿತು.
ಪಂದ್ಯದುದ್ದಕ್ಕೂ ಪ್ರಾಬಲ್ಯ ಮೆರೆದ ಬೆಂಗಳೂರು ತಂಡ ಮೊದಲಾರ್ಧದಲ್ಲಿ 31-14 ಅಂಕಗಳಿಂದ ಮುನ್ನಡೆ ಪಡೆಯಿತು. ನಂತರವೂ ಪ್ರಾಬಲ್ಯ ಮುಂದುವರೆಸಿ ಡೆಲ್ಲಿ ತಂಡವನ್ನು 4 ಬಾರಿ ಆಲೌಟ್ ಮಾಡಿತು.
ಬುಲ್ಸ್ ಪರ ರೈಡರ್ಗಳಾದ ಭರತ್ 15 ಅಂಕ ಹಾಗೂ ವಿಕಾಸ್ 13 ಅಂಕಗಳನ್ನು ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಮತ್ತೊಂದು 2ನೇ ಎಲಿಮಿನೇಟರ್ ಪಂದ್ಯದಲ್ಲಿ ಯು.ಪಿ. ಯೋಧಾಸ್ ವಿರುದ್ಧ ತಮಿಳ್ ತಲೈವಾಸ್ ಟೈ ಬ್ರೇಕರ್ನಲ್ಲಿ ಗೆದ್ದು ರೋಚಕವಾಗಿ ಸಮಿಫೈನಲ್ ಪ್ರವೇಶಿಸಿದೆ.
ಗುರುವಾರ ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು ಬುಲ್ಸ್ ಜೈಪುರ ತಂಡವನ್ನು ಎದುರಿಸಲಿದೆ.ಮತ್ತೊಂದು ಸೆಮಿಫೈನಲ್ನಲ್ಲಿ ಬಲಿಷ್ಠ ಪುಣೇರಿ ಪಲ್ಟಾನ್ ತಂಡವನ್ನು ತಮಿಳ್ ತಲೈವಾಸ್ ಎದುರಿಸಲಿದೆ.