ಪ್ರೊ ಕಬಡ್ಡಿ ಲೀಗ್ ಕೊನೆಯ ಹಂತಕ್ಕೆ ಬಂದು ನಿಂತಿದೆ. ಟೂರ್ನಿಯ ಚಾಂಪಿಯನ್ ಯಾರು ಎಂಬ ಪ್ರಶ್ನೆಗೆ ಶುಕ್ರವಾರ ಉತ್ತರ ಸಿಗಲಿದೆ. ಭರ್ಜರಿ ಫಾರ್ಮ್ ನಲ್ಲಿರುವ ಎರಡು ತಂಡಗಳು ಪ್ರಶಸ್ತಿ ಸುತ್ತಿನಲ್ಲಿ ಕಾದಾಟ ನಡೆಸಲಿವೆ. ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಪಾಟ್ನಾ ಪೈರೇಟ್ಸ್ ಹಾಗೂ ದಬಾಂಗ್ ದೆಹಲಿ ತಂಡಗಳು ಫೈನಲ್ ಫೈಟ್ ನಡೆಸಲಿವೆ.
ಸೊಗಸಾದ ಪ್ರದರ್ಶನ ನೀಡುತ್ತಿರುವ ಎರಡೂ ತಂಡಗಳು ಬಲಾಢ್ಯವಾಗಿವೆ. ರಕ್ಷಣೆ, ಟ್ಯಾಕಲ್ ವಿಚಾರದಲ್ಲೂ ಬಲಿಷ್ಠ ಆಟಗಾರರನ್ನು ಹೊಂದಿವೆ. ಪಾಟ್ನಾ ಪೈರೇಟ್ಸ್ ಫೈನಲ್ ಪ್ರವೇಶಿಸಿದಾಗಲೆಲ್ಲಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಬಾರಿ ಕಪ್ ಯಾರ ಪಾಲಾಗುತ್ತದೆ ಎಂಬುದಕ್ಕೆ ಕೌಟ್ ಡೌನ್ ಆರಂಭವಾಗಿದೆ. ದಬಾಂಗ್ ದೆಹಲಿ ತಂಡ ಚೊಚ್ಚಲ ಪ್ರಶಸ್ತಿಯ ಕನಸು ಕಾಣುತ್ತಿದೆ. ಉಪಾಂತ್ಯ ಪಂದ್ಯದಲ್ಲಿ ದಬಾಂಗ್ 40-35 ರಿಂದ ಬೆಂಗಳೂರು ತಂಡವನ್ನು, ಪಾಟ್ನಾ 38-27ರಿಂದ ಯು.ಪಿ ಯೋಧಾ ತಂಡವನ್ನು ಮಣಿಸಿ ಫೈನಲ್ ಗೆ ಪ್ರವೇಶಿಸಿವೆ.
ದಬಾಂಗ್ ದೆಹಲಿ ತಂಡದ ಪರ ನವೀನ್ ಕುಮಾರ್ ಭರ್ಜರಿ ಆಟವನ್ನು ಆಡುತ್ತಿದ್ದಾರೆ. ಇವರು ಆಡಿದ 16 ಪಂದ್ಯಗಳಲ್ಲಿ 194 ಅಂಕ ಕಲೆ ಹಾಕಿ ಭರವಸೆ ಮೂಡಿಸಿದ್ದಾರೆ. ಇವರಿಗೆ ವಿಜಯ್ ಉತ್ತಮ ಸಾಥ್ ನೀಡಬಲ್ಲರು. ಇವರು ಒಟ್ಟಾರೆ ಪ್ರಸಕ್ತ ಟೂರ್ನಿಯಲ್ಲಿ 144 ಅಂಕ ಸೇರಿಸಿದ್ದಾರೆ.
ಪಾಟ್ನಾ ತಂಡದ ರಕ್ಷಣಾ ವಿಭಾಗಕ್ಕೆ ಮೊಹಮ್ಮದ್ರೇಜಾ ಚಿಯಾನೆಹ್ ಬಲ ತುಂಬ ಬಲ್ಲರು. ಇವರು 23 ಪಂದ್ಯಗಳಲ್ಲಿ 87 ಬಾರಿ ಎದುರಾಳಿ ಆಟಗಾರರನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಗೆ ನೀರಜ್ ಕುಮಾರ್ ಉತ್ತಮ ಸಾಥ್ ನೀಡಬಲ್ಲರು.
ಇನ್ನು ಪಾಟ್ನಾ ಪೈರೇಟ್ಸ್ ತಂಡದ ಸ್ಟಾರ್ ಆಟಗಾರ ಸಚಿನ್ ಆಡಿದ 22 ಪಂದ್ಯಗಳಲ್ಲಿ 163 ರನ್ ಸೇರಿಸಿದ್ದಾರೆ. ಕರ್ನಾಟಕದ ಸ್ಟಾರ್ ಆಟಗಾರ ಪ್ರಶಾಂತ್ ಕುಮಾರ್ ರೈ ಹಾಗೂ ಗುಮಾನ್ ಸಿಂಗ್ ಅಂಕಗಳ ಬೇಟೆ ನಡೆಸಿ ಜಯದಲ್ಲಿ ಮಿಂಚ ಬಲ್ಲರು. ಭರವಸೆಯ ಆಟಗಾರ ಮಂಜೀತ್ ಚಿಲ್ಲರ್ ತಮ್ಮ ಅನುಭವ ಬಳಸಿಕೊಂಡು ದೆಹಲಿ ತಂಡಕ್ಕೆ ನೆರವಾಗಬಲ್ಲರು.