ಭಾರತದ ಅನುಭವಿ ಹಾಕಿ ಗೋಲ್ಕೀಪರ್ ಪಿಆರ್ ಶ್ರೀಜೇಶ್ ಅವರು 2021 ರಲ್ಲಿ ತಮ್ಮ ಪ್ರಭಾವಶಾಲಿ ಪ್ರದರ್ಶನಕ್ಕಾಗಿ ಸೋಮವಾರ ಪ್ರತಿಷ್ಠಿತ ವಿಶ್ವ ಕ್ರೀಡಾಕೂಟದ ವರ್ಷದ ಆಟಗಾರ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಈ ಪ್ರಶಸ್ತಿ ಪಡೆದ ಭಾರತದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು 2020 ರಲ್ಲಿ, ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಅವರು 2019 ರಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನಕ್ಕಾಗಿ ಈ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಸ್ಪ್ಯಾನಿಷ್ ಕ್ರೀಡಾ ಪರ್ವತಾರೋಹಿ ಅಲ್ಬರ್ಟೊ ಗಿನೆಸ್ ಲೋಪೆಜ್ ಮತ್ತು ಇಟಾಲಿಯನ್ ವುಶು ಆಟಗಾರ ಮೈಕೆಲ್ ಗಿಯೊರ್ಡಾನೊ ಅವರನ್ನು ಹಿಂದಿಕ್ಕಿ ಶ್ರೀಜೇಶ್ ಪ್ರಶಸ್ತಿ ಗೆದ್ದರು.
“ಈ ಪ್ರಶಸ್ತಿಯನ್ನು ಗೆದ್ದಿರುವುದು ನನಗೆ ಅತ್ಯಂತ ಗೌರವವಾಗಿದೆ. ಈ ಪ್ರಶಸ್ತಿಗೆ ನನ್ನನ್ನು ನಾಮನಿರ್ದೇಶನ ಮಾಡಿದ್ದಕ್ಕಾಗಿ ಎಫ್ಐಎಚ್ಗೆ ಮೊದಲನೆಯದಾಗಿ ಧನ್ಯವಾದಗಳು. ಎರಡನೆಯದಾಗಿ, ನನಗೆ ಮತ ಹಾಕಿದ ವಿಶ್ವದಾದ್ಯಂತದ ಭಾರತೀಯ ಹಾಕಿಯ ಅಭಿಮಾನಿಗಳಿಗೂ ಧನ್ಯವಾದಗಳು” ಎಂದು ಶ್ರೀಜೇಶ್ ತಿಳಿಸಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದ ಸಾಧನೆಯಲ್ಲಿ ಇವರು ತಂಡದ ಭಾಗವಾಗಿದ್ದರು. ಅವರು ಒಂದು ಲಕ್ಷದ 27 ಸಾವಿರದ 647 ಮತಗಳನ್ನು ಪಡೆದರು. ಲೋಪೆಜ್ ಮತ್ತು ಗಿಯೋರ್ಡಾನೊ ಕ್ರಮವಾಗಿ 67 ಸಾವಿರದ 428 ಮತ್ತು 52 ಸಾವಿರದ 46 ಮತಗಳನ್ನು ಪಡೆದರು.
ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಏಕೈಕ ಭಾರತೀಯ ಶ್ರೀಜೇಶ್. ಅವರ ಹೆಸರನ್ನು ಅಂತರರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್ಐಎಚ್) ಶಿಫಾರಸು ಮಾಡಿದೆ. ಅಕ್ಟೋಬರ್ನಲ್ಲಿ ನಡೆದ ಎಫ್ಐಎಚ್ ಸ್ಟಾರ್ಸ್ ಅವಾರ್ಡ್ಸ್ನಲ್ಲಿ ಶ್ರೀಜೇಶ್ 2021 ರ ವರ್ಷದ ಗೋಲ್ಕೀಪರ್ ಆಗಿ ಆಯ್ಕೆಯಾದರು.