ಶುಕ್ರವಾರದಿಂದ ಪ್ರಾರಂಭವಾಗುವ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ನಡೆಯಲಿದೆ. ಈ ಟೆಸ್ಟ್ ಗೆ ಕೋವಿಡ್ -19 ನ ಮತ್ತು ಕೆಟ್ಟ ಹವಾಮಾನದ ಕರಿನೆರಳು ಕಾಡಲಿದೆ. ಎರಡೂ ತಂಡಗಳಲ್ಲಿ ತಲಾ ಒಂದು ಕೋವಿಡ್-19 ಪ್ರಕರಣ ವರದಿಯಾಗಿದೆ. ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದು, ಆಸ್ಟ್ರೇಲಿಯಾದ ಬೌಲಿಂಗ್ ಸಲಹೆಗಾರ ಫವಾದ್ ಅಹ್ಮದ್ ರಲ್ಲೂ ಕೋವಿಡ್-19 ಕಾಣಿಸಿಕೊಂಡಿದೆ.
ಪಾಕಿಸ್ತಾನದ ವೇಗದ ಬೌಲರ್ ಹಸನ್ ಅಲಿ ಮತ್ತು ಆಲ್ ರೌಂಡರ್ ಫಹೀಮ್ ಅಶ್ರಫ್ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ. ಅವರ ಸ್ಥಾನಕ್ಕೆ ವೇಗದ ಬೌಲರ್ ನಸೀಮ್ ಶಾ ಮತ್ತು ಆಲ್ ರೌಂಡರ್ ಇಫ್ತಿಕರ್ ಅಹ್ಮದ್ ಆಯ್ಕೆಯಾಗಿದ್ದಾರೆ.
ಗುರುವಾರ ರಾವಲ್ಪಿಂಡಿಯಲ್ಲಿ ಸುರಿದ ಮಳೆಯಿಂದಾಗಿ ಉಭಯ ತಂಡಗಳು ತಮ್ಮ ತಮ್ಮ ಹೋಟೆಲ್ಗಳಿಗೆ ಉಳಿಯ ಬೇಕಾಯಿತು. ಟೆಸ್ಟ್ ಪಂದ್ಯದ ಕೊನೆಯ ಮೂರು ದಿನಗಳಲ್ಲಿಯೂ ಮಳೆಯಾಗುವ ಸಾಧ್ಯತೆಯಿದೆ.
1998ರ ನಂತರ ಆಸ್ಟ್ರೇಲಿಯಾ ಪಾಕಿಸ್ತಾನದಲ್ಲಿ ಟೆಸ್ಟ್ ಪಂದ್ಯ ಆಡುತ್ತಿರುವುದು ಇದೇ ಮೊದಲು. ಆಸ್ಟ್ರೇಲಿಯ ತಂಡ ಭಾನುವಾರ ಪಾಕಿಸ್ತಾನ ತಲುಪಿದ್ದು ಕೇವಲ ಎರಡು ಸೆಷನ್ಗಳಲ್ಲಿ ಅಭ್ಯಾಸ ನಡೆಸುವ ಅವಕಾಶ ಪಡೆದುಕೊಂಡಿದೆ.
‘ನಮ್ಮ ತಂಡ ಹೇಗಿರುತ್ತದೆ ಮತ್ತು ನಾವು ಏನು ಮಾಡಬೇಕೆಂದು ನಮಗೆ ತಿಳಿದಿದೆ ಆದರೆ ನಾವು ವಿಕೆಟ್ ಅನ್ನು ಸಂಪೂರ್ಣವಾಗಿ ನೋಡಿಕೊಂಡು ನಾವು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲು ಬಯಸುತ್ತೇವೆ. ಬಹುಶಃ ನಾವು ಇಬ್ಬರು ಸ್ಪಿನ್ನರ್ಗಳು ಮತ್ತು ಮೂವರು ವೇಗದ ಬೌಲರ್ಗಳೊಂದಿಗೆ ಹೋಗುತ್ತೇವೆ” ಎಂದು ಕಮಿನ್ಸ್ ಹೇಳಿದ್ದಾರೆ.
ಮತ್ತೊಂದೆಡೆ, ಆಸ್ಟ್ರೇಲಿಯಕ್ಕೆ ತಮ್ಮ ತಂಡ ಕಠಿಣ ಸವಾಲು ನೀಡಲಿದೆ ಎಂಬ ವಿಶ್ವಾಸದಲ್ಲಿರುವ ಪಾಕ್ ನಾಯಕ ಬಾಬರ್ ಅಜಮ್, ‘ನಾಯಕನಾಗಿ ಆಸ್ಟ್ರೇಲಿಯಾಕ್ಕೆ ಕಠಿಣ ಸವಾಲು ನೀಡುವ ಅತ್ಯುತ್ತಮ ತಂಡ ನಮ್ಮ ಬಳಿ ಇದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.