ಪಾಕಿಸ್ತಾನ(Pakistan) ತಂಡದ ಸ್ಪಿನರ್ ಅಬ್ರಾಬ್ ಅಹ್ಮದ್(Abrar Ahmed)(7/114) ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಅಪರೂಪದ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಇಂಗ್ಲೆಂಡ್(England) ವಿರುದ್ಧ ಮುಲ್ತಾನ್ನಲ್ಲಿ ಶುಕ್ರವಾರ ಆರಂಭಗೊಂಡ 2ನೇ ಟೆಸ್ಟ್ನಲ್ಲಿ ಅಬ್ರಾರ್ ಅಹ್ಮದ್ ಪಾಕಿಸ್ತಾನದ ಪರ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಾದಾರ್ಪಣೆ ಮಾಡಿದರು. ಮೊದಲ ಪಂದ್ಯದಲ್ಲೇ ಪರಿಣಾಮಕಾರಿ ಸ್ಪಿನ್ ಬೌಲಿಂಗ್ ಮೂಲಕ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳಿಗೆ ಕಡಿವಾಣ ಹಾಕಿದ ಅಬ್ರಾರ್ ಅಹ್ಮದ್, 114 ರನ್ ನೀಡಿ 7 ವಿಕೆಟ್ ಪಡೆದು ಮಿಂಚಿದರು.
ಅತ್ಯುತ್ತಮ ಸ್ಪಿನ್ ದಾಳಿಯಿಂದ ಎದುರಾಳಿ ಬ್ಯಾಟ್ಸ್ಮನ್ಗಳ ಆಟಕ್ಕೆ ಕಡಿವಾಣ ಹಾಕಿದ ಅಬ್ರಾರ್ ಅಹ್ಮದ್, ಆ ಮೂಲಕ ಪಾಕಿಸ್ತಾನ ತಂಡದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಅವರೊಂದಿಗೆ ಎಲೈಟ್ ಲಿಸ್ಟ್ ಸೇರಿದರು. 2ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನ ಭೋಜನ ವಿರಾಮದ ವೇಳೆ 13 ಓವರ್ಗಳಲ್ಲಿ 70 ರನ್ ನೀಡಿ 5 ವಿಕೆಟ್ ಪಡೆದಿದ್ದ ಅಬ್ರಾರ್ ಅಹ್ಮದ್, ನಂತರದಲ್ಲಿ 5 ವಿಕೆಟ್ ಪಡೆದು ಒಟ್ಟು 7 ವಿಕೆಟ್ಗಳನ್ನ ಪಡೆದು ಗಮನ ಸೆಳೆದರು.
ಚೊಚ್ಚಲ ಪಂದ್ಯದಲ್ಲೇ 5 ವಿಕೆಟ್ ಕಬಳಿಸಿದ ಅಬ್ರಾರ್, ಮೊದಲ ಪಂದ್ಯದಲ್ಲೇ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಪಾಕಿಸ್ತಾನದ 5ನೇ ಬೌಲರ್ ಎನಿಸಿದರು. ಈ ಹಿಂದೆ ಮೊಹಮ್ಮದ್ ನಜೀರ್, ಬಿಲಾಲ್ ಆಸಿಫ್, ನುಮನ್ ಅಲಿ ಹಾಗೂ ಶಾಹಿದ್ ಅಫ್ರಿದಿ ಅವರುಗಳು ಈ ಸಾಧನೆ ಮಾಡಿದ್ದರು. ಅಬ್ರಾರ್ ಅಹ್ಮದ್ ಅವರಿಗೂ ಮುನ್ನ ಶಾಹಿದ್ ಅಫ್ರಿದಿ 1998ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕರಾಚಿಯಲ್ಲಿ ಈ ಸಾಧನೆ ಮಾಡಿದ್ದರು.