ಆರಂಭಿಕ ಬ್ಯಾಟ್ಸಮನ್ ಇಮಾಮ್-ಉಲ್-ಹಕ್(157) ಹಾಗೂ ಅಜ಼ರ್ ಅಲಿ(185) ಅಮೋಘ ಶತಕದ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಮೇಲುಗೈ ಸಾಧಿಸಿದೆ.
ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವೂ ಪಾಕಿಸ್ತಾನದ ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ಬ್ಯಾಟ್ಸಮನ್‌ಗಳ ಸಾಂಘಿಕ ಪ್ರದರ್ಶನದ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 476 ರನ್‌ಗಳಿಸಿ, ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕುತ್ತರವಾಗಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ, ಎರಡನೇ ದಿನದಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 5 ರನ್‌ಗಳಿಸಿದೆ.
ಮೊದಲ ದಿನದ ಮೊತ್ತ 1 ವಿಕೆಟ್ ನಷ್ಟಕ್ಕೆ 245 ರನ್‌ಗಳಿಂದ ಎರಡನೇ ದಿನದಾಟ ಆರಂಭಿಸಿದ ಪಾಕಿಸ್ತಾನ, ದಿನದಂತ್ಯದವರೆಗೂ ಬ್ಯಾಟಿಂಗ್ ಮುಂದುವರಿಸಿತು. ದಿನದಂತ್ಯಕ್ಕೆ ಅಜೇಯರಾಗುಳಿದಿದ್ದ ಇಮಾಮ್ ಹಾಗೂ ಅಜ಼ರ್ ಅಲಿ ಜೋಡಿ, ಎರಡನೇ ದಿನವೂ ಬ್ಯಾಟಿಂಗ್‌ನಲ್ಲಿ ಪ್ರಾಬಲ್ಯ ಮೆರೆದರು. 132 ರನ್‌ಗಳಿಂದ ಇನ್ನಿಂಗ್ಸ್ ಆರಂಭಿಸಿದ ಇಮಾಮ್-ಉಲ್-ಹಕ್, ವೈಯಕ್ತಿಕ 157 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಅದ್ಭುತ ಆಟ ಮುಂದುವರಿಸಿದ ಅಜ಼ರ್ ಅಲಿ, ಆಸ್ಟ್ರೇಲಿಯಾ ಬೌಲರ್‌ಗಳ ಮೇಲೆ ಪ್ರಾಬಲ್ಯ ಮೆರೆದರು.
ಜವಾಬ್ದಾರಿಯ ಆಟವಾಡಿದ ಅಜ಼ರ್ ಅಲಿ ತಮ್ಮ ಟೆಸ್ಟ್ ವೃತ್ತಿ ಜೀವನದ 19ನೇ ಟೆಸ್ಟ್ ಶತಕ ಬಾರಿಸಿ ಮಿಂಚಿದರು. ಉತ್ತಮ ಆಟದಿಂದ ದ್ವಿಶಕತದತ್ತ ಮುಖ ಮಾಡಿದ್ದ ಅಜ಼ರ್ ಅಲಿ, 185 ರನ್‌ಗಳಿಸಿ ಹೊರ ನಡೆದರು. ನಂತರ ಬಂದ ಬಾಬರ್ ಆಜ಼ಂ(36), ಮೊಹಮ್ಮದ್ ರಿಜ್ವಾನ್(29*) ಹಾಗೂ ಇಫ್ತಿಕರ್ ಅಹ್ಮೆದ್(13*) ತಂಡದ ಮೊತ್ತವನ್ನು ಹೆಚ್ಚಿಸಿದರು. ತಂಡದ ಮೊತ್ತ 4 ವಿಕೆಟ್ ನಷ್ಟಕ್ಕೆ 476 ರನ್‌ಗಳಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳಲಾಯಿತು.
ಇದಕ್ಕುತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 2ನೇ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 5 ರನ್‌ಗಳಿಸಿದ್ದು, ಡೇವಿಡ್ ವಾರ್ನರ್ ಹಾಗೂ ಉಸ್ಮಾನ್ ಖವಾಜ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ವಿಶ್ವದ ಶ್ರೇಷ್ಠ ಬೌಲರ್‌ಗಳನ್ನು ಹೊಂದಿರುವ ಆಸ್ಟ್ರೇಲಿಯಾ ಬೌಲರ್‌ಗಳು ರಾವಲ್ಪಿಂಡಿ ಅಂಗಳದಲ್ಲಿ ವಿಕೆಟ್‌ಗಾಗಿ ಪರದಾಡಿದರು. ತಂಡದ ನಾಲ್ವರು ಪ್ರಮುಖ ಬೌಲರ್‌ಗಳಾದ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್, ನಾಥನ್ ಲಿಯೋನ್ ಹಾಗೂ ಜೋಶ್ ಹೇಜ಼ಲ್ವುಡ್ ನಿರೀಕ್ಷಿತ ಸಕ್ಸಸ್ ಕಾಣಲಿಲ್ಲ.