ಪಾಕಿಸ್ತಾನ್ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯಾವಳಿಗೆ ಕೆಲವೇ ದಿನಗಳು ಬಾಕಿಯಿದೆ. ಐತಿಹಾಸಿಕ ಪಂದ್ಯಾವಳಿ ಆರಂಭಕ್ಕೂ ಮುನ್ನವೇ ಕೋವಿಡ್-19 ಆತಂಕ ಎದುರಾಗಿದ್ದು, ಅತಿಥೇಯ ಪಾಕಿಸ್ತಾನ ತಂಡದ ವೇಗದ ಬೌಲರ್ ಹ್ಯಾರಿಸ್ ರಾಫ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಉಭಯ ತಂಡಗಳ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಮಾ.4ರಂದು ರಾವಲ್ಪಿಂಡಿಯಲ್ಲಿ ನಡೆಯಲಿದೆ. ಇದಕ್ಕಾಗಿ ಎರಡೂ ತಂಡಗಳು ಈಗಾಗಲೇ ಸೂಕ್ತ ತಯಾರಿ ಮಾಡಿಕೊಂಡಿದ್ದು, ಇದರ ಬೆನ್ನಲ್ಲೇ ಹ್ಯಾರಿಸ್ ರಾಫ್ ಅವರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಹ್ಯಾರಿಸ್ ರಾಫ್ ಅವರನ್ನು ಐಸೊಲೇಷನ್ನಲ್ಲಿ ಇರಿಸಲಾಗಿದ್ದು, ಉಳಿದ ಆಟಗಾರರು, ರಾವಲ್ಪಿಂಡಿಯಲ್ಲಿ ಅಭ್ಯಾಸ ಮುಂದುವರಿಸಿದ್ದಾರೆ ಎಂದು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ತಿಳಿಸಿದೆ.
ಪಾಕಿಸ್ತಾನ ತಂಡ ಈಗಾಗಲೇ ಗಾಯದ ಸಮಸ್ಯೆಗೆ ಸಿಲುಕಿದ್ದು, ವೇಗಿ ಹಸನ್ ಅಲಿ ಹಾಗೂ ಆಲ್ರೌಂಡರ್ ಫಹೀಮ್ ಅಶ್ರಫ್ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ಹ್ಯಾರಿಸ್ ರಾಫ್ ತಮ್ಮ ತವರಿನಲ್ಲಿ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದರು. ಆದರೆ ಕೊರೊನಾ ಪಾಸಿಟಿವ್ ಬಂದಿರುವುದು ಹ್ಯಾರಿಸ್ ಅವರಿಗೆ ನಿರಾಸೆ ಮೂಡಿಸಿದೆ.
ಹ್ಯಾರಿಸ್ ರಾಫ್ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಅಬ್ಬಾಸ್ ಹಾಗೂ ನಸೀಮ್ ಶಾ ಅವರುಗಳು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶಹೀನ್ ಅಫ್ರೀದಿ ಹಾಗೂ ಮೊಹಮ್ಮದ್ ವಾಸಿಂ ಅವರೊಂದಿಗೆ ತಂಡದಲ್ಲಿ ಆಡುವ ನಿರೀಕ್ಷೆಯಲ್ಲಿದ್ದಾರೆ. ಟೆಸ್ಟ್ ಪಂದ್ಯಕ್ಕಾಗಿ ಎರಡು ತಂಡಗಳ ಬಲಿಷ್ಠ ತಯಾರಿ ಮಾಡಿಕೊಂಡಿದ್ದು, 1998ರ ಬಳಿಕ ಮೊದಲ ಬಾರಿಗೆ ಪಾಕ್ ನೆಲದಲ್ಲಿ ಟೆಸ್ಟ್ ಸರಣಿ ಆಡುತ್ತಿರುವ ಆಸ್ಟ್ರೇಲಿಯಾ ಗೆಲುವಿನ ನಿರೀಕ್ಷೆಯಲ್ಲಿದೆ.