ಅತಿಥೇಯ ಪಾಕಿಸ್ತಾನದ ವಿರುದ್ಧದ ಏಕದಿನ ಸರಣಿಗೆ ತಯಾರಿ ನಡೆಸುತ್ತಿರುವ ಆಸ್ಟ್ರೇಲಿಯಾಕ್ಕೆ ಸರಣಿ ಆಘಾತ ಎದುರಾಗಿದ್ದು, ಆಸೀಸ್ ತಂಡದ ಪ್ರಮುಖ ಆಲ್ರೌಂಡರ್ ಮಿಚೆಲ್ ಮಾರ್ಷ್, ಗಾಯದ ಸಮಸ್ಯೆಯಿಂದಾಗಿ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ.
ಇತ್ತೀಚಿಗೆ ಮುಕ್ತಾಯಗೊಂಡ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಸಂಭ್ರಮದೊಂದಿಗೆ ಆಸ್ಟ್ರೇಲಿಯಾ, ಏಕದಿನ ಸರಣಿಗೆ ತಯಾರಿ ನಡೆಸುತ್ತಿದೆ. ಇದರ ಬೆನ್ನಲ್ಲೇ ಮಿಚೆಲ್ ಮಾರ್ಷ್, ಗಾಯದ ಸಮಸ್ಯೆಯಿಂದಾಗಿ ಏಕದಿನ ಸರಣಿಯಿಂದ ಹೊರಗುಳಿಯುತ್ತಿರುವುದು ಪ್ರವಾಸಿ ತಂಡಕ್ಕೆ ದೊಡ್ಡ ಹಿನ್ನಡೆ ಉಂಟು ಮಾಡಲಿದೆ. ಆಸೀಸ್ ತಂಡದ ಪ್ರಮುಖ ಆಟಗಾರರಾದ ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್ವುಡ್ ಹಾಗೂ ಪ್ಯಾಟ್ ಕಮ್ಮಿನ್ಸ್ ಅವರುಗಳು ಈಗಾಗಲೇ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ.
ಈ ನಡುವೆ ಹ್ಯಾಮ್‌ಸ್ಟ್ರಿಂಗ್ ಇಂಜುರಿ ಕಾರಣದಿಂದಾಗಿ ಕೇನ್ ರಿಚರ್ಡ್ಸನ್ ಸಹ ತಂಡಕ್ಕೆ ಅಲಭ್ಯರಾಗಿದ್ದಾರೆ. ಇದರ ಬೆನ್ನಲ್ಲೇ ಮಿಚೆಲ್ ಮಾರ್ಷ್ ಕೂಡ ಗಾಯದ ಸಮಸ್ಯೆಗೆ ತುತ್ತಾಗಿರುವುದು ಆರನ್ ಫಿಂಚ್ ಪಡೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಪ್ರಮುಖ ಬೌಲರ್‌ಗಳ ಅನುಪಸ್ಥಿತಿಯಲ್ಲಿ ಏಕದಿನ ಸರಣಿಯಲ್ಲಿ ಯಾವ ರೀತಿ ಪ್ರದರ್ಶನ ನೀಡುವುದು ಎಂಬ ಆತಂಕ ಮೂಡಿಸಿದೆ.
ಮಿಚೆಲ್ ಮಾರ್ಷ್ ಗಾಯದ ಸಮಸ್ಯೆ ಕುರಿತು ಪ್ರತಿಕ್ರಿಯಿಸಿರುವ ನಾಯಕ ಆರನ್, ಏಕದಿನ ಸರಣಿಯ ಅಭ್ಯಾಸದ ವೇಳೆ ಮಿಚೆಲ್ ಮಾರ್ಷ್ ಹಿಪ್-ಫ್ಲೆಕ್ಸರ್ ಸಮಸ್ಯೆಗೆ ತುತ್ತಾಗಿದ್ದು, ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಿದೆ. ಹೀಗಾಗಿ ಮಿಚೆಲ್ ಮಾರ್ಷ್ ಏಕದಿನ ಸರಣಿಗೆ ಲಭ್ಯರಾಗುತ್ತಾರೆಂದು ನಾನು ಭಾವಿಸುವುದಿಲ್ಲ. ತಂಡದ ಫೀಲ್ಡಿಂಗ್ ತರಬೇತಿ ವೇಳೆ ಮಿಚೆಲ್ ಮಾರ್ಷ್, ಕೆಳಗಿ ಬಗ್ಗಿ ಒಂದೇ ಕೈಯಲ್ಲಿ ಚೆಂಡನ್ನು ಎಸೆಯಲು ಹೋದ ಸಂದರ್ಭದಲ್ಲಿ ಹಿಪ್-ಫ್ಲೆಕ್ಸರ್ ಸಮಸ್ಯೆಗೆ ತುತ್ತಾಗಿದ್ದಾರೆ ಎಂದಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್‌ಗೂ ಆತಂಕ:
ಆಸೀಸ್ ಆಲ್ರೌಂಡರ್ ಮಿಚೆಲ್ ಮಾರ್ಷ್ ಗಾಯದ ಸಮಸ್ಯೆಗೆ ಸಿಲುಕಿರುವುದು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೂ ಆತಂಕ ಎದುರಾಗಿದೆ. ಈ ಬಾರಿಯ ಐಪಿಎಲ್ ಹರಾಜಿನಲ್ಲಿ 6.50 ಕೋಟಿ ರೂ.ಗೆ ಡೆಲ್ಲಿ ಪಾಲಾಗಿದ್ದ ಮಿಷೆಲ್ ಮಾರ್ಷ್ ಪಾಕ್ ಪ್ರವಾಸದ ಬಳಿಕ ಏಪ್ರಿಲ್ 6ರಂದು ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಇದೀಗ ಗಾಯದ ಸಮಸ್ಯೆಯಿಂದಾಗಿ ಪಾಕ್ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿರುವ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿಯಲ್ಲಿ ಮಾರ್ಷ್ ಆಡುವ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆತಂಕ ಮೂಡಿಸಿದೆ.