ಮೊದಲ ಟೆಸ್ಟ್ ಗೆಲುವಿನ ಹೀರೋ ಕೇನ್ ವಿಲಿಯಂಸನ್(215) ಹಾಗೂ ಹೆನ್ರಿ ನಿಕೋಲ್ಸ್(200*) ಭರ್ಜರಿ ದ್ವಿಶತಕದ ನೆರವಿನಿಂದ ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಕಲೆಹಾಕಿರುವ ನ್ಯೂಜಿ಼ಲೆಂಡ್ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.
ವೆಲ್ಲಿಂಗ್ಟನ್‌ನಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನದಾಟದಲ್ಲಿ ಕಿವೀಸ್ ಬ್ಯಾಟ್ಸ್‌ಮನ್‌ಗಳು ಪ್ರಾಬಲ್ಯ ಮೆರೆದರು. ಪ್ರಮುಖವಾಗಿ ಕೇನ್ ವಿಲಿಯಂಸನ್(215) ಹಾಗೂ ಹೆನ್ರಿ ನಿಕೋಲ್ಸ್(200*) ಡಬಲ್ ಸೆಂಚುರಿ ನೆರವಿನಿಂದ ನ್ಯೂಜಿ಼ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ಗೆ 580 ರನ್‌ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕುತ್ತರವಾಗಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಶ್ರೀಲಂಕಾ ಎರಡನೇ ದಿನದಂತ್ಯಕ್ಕೆ 26/2 ರನ್‌ಗಳೊಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದೆ.
ಕೇನ್-ನಿಕೋಲ್ಸ್ ಡಬಲ್ ಧಮಾಕ:
ಮೊದಲ ದಿನದಂತ್ಯಕ್ಕೆ 155/2 ರನ್‌ಗಳಿಂದ 2ನೇ ದಿನದಾಟ ಆರಂಭಿಸಿದ ಕಿವೀಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿತು. ಮೊದಲ ದಿನದಂತ್ಯಕ್ಕೆ ಅಜೇಯರಾಗಿದ್ದ ವಿಲಿಯಂಸನ್(215) ಹಾಗೂ ನಿಕೋಲ್ಸ್(200*) ಲಂಕಾ ಬೌಲರ್‌ಗಳ ಬೆವರಿಳಿಸಿದರು. ಪ್ರವಾಸಿ ತಂಡದ ಮೇಲೆ ಸಂಪೂರ್ಣವಾಗಿ ಹಿಡಿತ ಸಾಧಿಸಿದ ಈ ಜೋಡಿ, ಡಬಲ್ ಸೆಂಚುರಿ ಸಂಭ್ರಮ ಆಚರಿಸಿದರು. ಅಲ್ಲದೇ 3ನೇ ವಿಕೆಟ್‌ಗೆ 363 ರನ್‌ಗಳಿಸುವ ಮೂಲಕ ತಂಡದ ಮೊತ್ತ 500ರ ಗಡಿದಾಟಿಸುವಲ್ಲಿ ಯಶಸ್ವಿಯಾದರು. ಉಳಿದಂತೆ ಕಿವೀಸ್ ಪರ ಟಾಮ್ ಲೇಥಂ(21), ಡೆವೊನ್ ಕಾನ್ವೆ(78), ಡೆರಿಲ್ ಮಿಚೆಲ್(17) ಹಾಗೂ ಟಾಮ್ ಬ್ಲಂಡಲ್(17) ಅಲ್ಪಮೊತ್ತದ ಕಾಣಿಕೆ ನೀಡಿ ತಂಡಕ್ಕೆ ಆಸರೆಯಾದರು. ಲಂಕಾ ರಜಿತ 2, ಧನಂಜಯ ಡಿಸಿಲ್ವಾ ಮತ್ತು ಜಯಸೂರ್ಯ ತಲಾ 1 ವಿಕೆಟ್ ಪಡೆದರು.
ಕಿವೀಸ್ ತಂಡದ ಬೃಹತ್ ಮೊತ್ತಕ್ಕೆ ಪ್ರತಿಯಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಆರಂಭಿಕ ಆಘಾತ ಕಂಡಿದೆ. ಲಂಕಾ ಪರ ಆರಂಭಿಕರಾಗಿ ಬಂದ ಫೆರ್ನಾಂಡೊ(6) ಹಾಗೂ 1ನೇ ಕ್ರಮಾಂಕದಲ್ಲಿ ಬಂದ ಕುಸಲ್ ಮೆಂಡಿಸ್(0) ಖಾತೆ ತೆರೆಯುವ ಮೊದಲೇ ಪೆವಿಲಿಯನ್ ಸೇರಿಕೊಂಡರು. ಸದ್ಯ 2ನೇ ದಿನದಂತ್ಯಕ್ಕೆ ಶ್ರೀಲಂಕಾ 26/2 ರನ್‌ಗಳಿಸಿದ್ದು, ನಾಯಕ ಕರುಣಾರತ್ನೆ(16) ಹಾಗೂ ಪ್ರಭಾತ್ ಜಯಸೂರ್ಯ(4*) 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
NZ v SL, New Zealand, Sri Lanka, Kane Williamson, Henry Nicholls