Tennis – ಕೋಚ್ ನಿಂದಲೂ ದೂರವಾದ ನೊವಾಕ್ ಜಾಕೊವಿಕ್

ಸರ್ಬಿಯಾದ ನೊವಾಕ್ ಜಾಕೊವಿಕ್ ಮತ್ತು ಅವರ ದೀರ್ಘಕಾಲದ ಕೋಚ್ ಮರಿಯನ್ ವಾಜ್ಡಾ ನಾನೊಂದು ತೀರ.. ನೀನೊಂದು ತೀರ ಥರ ಆಗಿಬಿಟ್ಟಿದ್ದಾರೆ.
ಹಾಗಂತ ಇದೇನೂ ಮೊದಲ ಬಾರಿ ಅಲ್ಲ. ಈ ಹಿಂದೆ ಅಂದ್ರೆ 2017ರಲ್ಲಿ ಬೇರ್ಪಟ್ಟಿದ್ರೂ ಮತ್ತೆ ಒಂದಾಗಿದ್ದರು. ಆದ್ರೆ ಈ ಬಾರಿ ಖಾಯಂ ಆಗಿ ಬೇರ್ಪಡುವುದು ಖಚಿತವಾಗಿದೆ.
ಈ ವಿಷ್ಯವನ್ನು ನೊವಾಕ್ ಜಾಕೊವಿಕ್ ಅವರ ವೆಬ್ ಸೈಟ್ ನಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ. ಜಾಕೊವಿಕ್ ಮತ್ತು ಮರಿಯನ್ ಅವರು ಪರಸ್ಪರ ಮಾತುಕತೆ ನಡೆಸಿ ದೂರವಾಗುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಮರಿಯನ್ ವಾಜ್ಡಾ ಅವರು ಕಳೆದ 15 ವರ್ಷಗಳಿಂದ ನೊವಾಕ್ ಜಾಕೊವಿಕ್ ಅವರಿಗೆ ಕೋಚ್ ಆಗಿದ್ದರು. ಈ 15 ವರ್ಷಗಳಲ್ಲಿ ಜಾಕೊವಿಕ್ ಅವರು 20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಸದ್ಯ ಜಾಕೊವಿಕ್ ಮತ್ತು ರೋಜರ್ ಫೆಡರರ್ ಅವರು ತಲಾ 20 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆಲ್ಲುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಸ್ಪೇನ್ ರಫೆಲ್ ನಡಾಲ್ ಅವರು 21 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದು ಅಗ್ರ ಸ್ಥಾನದಲ್ಲಿದ್ದಾರೆ. Novak Djokovic no longer with longtime coach Marian Vajda
ಇತ್ತೀಚಿನ ದಿನಗಳಲ್ಲಿ ಜಾಕೊವಿಕ್ ಅವರು ಆಟಕ್ಕಿಂತ ಹೆಚ್ಚು ವಿವಾದದಿಂದಲೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಕೋವಿಡ್ ಲಸಿಕೆ ಹಾಕಿಕೊಳ್ಳದೇ ಆಸ್ಟ್ರೇಲಿಯನ್ ಓಪನ್ ಟೂರ್ನಿಯಿಂದಲೂ ಹೊರನಡೆದಿದ್ದರು. ಇತ್ತೀಚೆಗೆ ನಡೆದ ದುಬೈ ಓಪನ್ ಟೂರ್ನಿಯಲ್ಲೂ ನಿರಾಸೆ ಅನುಭವಿಸಿದ್ದರು. ಇದೀಗ ದೀರ್ಘಾವಧಿಯ ಕೋಚ್ ಮತ್ತು ಗೆಳೆಯ ಮರಿಯನ್ ವಾಜ್ಡಾ ಅವರಿಂದಲೂ ದೂರವಾಗಿದ್ದಾರೆ. ಅಲ್ಲದೆ ಎರಡು ವರ್ಷಗಳಿಂದ ನಂಬರ್ ವನ್ ಸ್ಥಾನವೂ ಅಲುಗಾಡಿದೆ. ಸದ್ಯ ಜಾಕೊವಿಕ್ ಅವರು ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಮರಿಯನ್ ವಾಜ್ಡಾ ಮತ್ತು ನನ್ನ ಸಂಬಂಧಕ್ಕೆ ಸುಮಾರು 15 ವರ್ಷಗಳ ನಂಟಿದೆ. ಈ 15 ವರ್ಷಗಳಲ್ಲಿ ನಾವಿಬ್ಬರು ಜೊತೆಯಾಗಿ ಅಪ್ರತಿಮ ಸಾಧನೆಯನ್ನು ಮಾಡಿದ್ದೇವೆ. ನನ್ನ ಯಶಸ್ಸಿನ ಹಿಂದೆ ಮರಿಯನ್ ವಾಡ್ಜಾ ಅವರ ಶ್ರಮ, ಬೆಂಬಲ, ಸ್ಪೂರ್ತಿ ಎಲ್ಲವೂ ಇದೆ. ಇದಕ್ಕೆ ನಾನು ಎಷ್ಟು ಧನ್ಯವಾದ ಹೇಳಿದ್ರೂ ಸಾಕಾಗಲ್ಲ ಎಂದು ನೊವಾಕ್ ಜಾಕೊವಿಕ್ ಹೇಳಿದ್ದಾರೆ.
ಒಬ್ಬ ಆಟಗಾರನಾಗಿ ನೊವಾಕ್ ಜಾಕೊವಿಕ್ ಅದ್ಭುತವಾದ ಸಾಧನೆಯನ್ನು ಮಾಡಿದ್ದಾರೆ. ಈ ಸಾಧನೆಯಲ್ಲಿ ನಾನು ಕೂಡ ಆತನ ಜೊತೆಗಿದ್ದೆ ಎಂಬ ಹೆಮ್ಮೆ ನನಗಿದೆ. ಅಪ್ರತಿಮ ಸಾಧನೆಯ ಬಗ್ಗೆ ಗೌರವ ಇದೆ ಎಂದು ಕೋಚ್ ಮರಿಯನ್ ವಾಜ್ಡಾ ಹೇಳಿದ್ದಾರೆ.