ಇದು ಸೇಡಿನ ಪಂದ್ಯ. ಆದರೆ ಎರಡೂ ತಂಡಗಳ ಸ್ಥಿತಿ ಬೇರೆಯದ್ದೇ ಆಗಿದೆ. ಮುಂಬೈ ಒಂದೇ ಒಂದು ಗೆಲುವು ಕಾಣದೆ ಒದ್ದಾಡುತ್ತಿದೆ. 7 ಪಂದ್ಯ ಮುಗಿದರೂ ಗೆಲುವಿನ ಖಾತೆ ತೆರೆದಿಲ್ಲ. ಲಖನೌ ಸೂಪರ್ ಜೈಂಟ್ಸ್ ತನ್ನ ಮೊದಲ ಆವೃತ್ತಿಯಲ್ಲೇ ಪ್ಲೇ-ಆಫ್ ಕನಸಿನಲ್ಲಿದೆ. ಲಖನೌ 7 ಪಂದ್ಯಗಳಲ್ಲಿ 4ನ್ನು ಗೆದ್ದು 8 ಅಂಕವನ್ನು ಪಡೆದಿದೆ.
ವಾಂಖೆಡೆಯಲ್ಲಿ ಈ ತಂಡಗಳ ನಡುವೆ ನಡೆಯುವುದು ಸೇಡಿನ ಸಮರ. ಹಿಂದಿನ ಮುಖಾಮುಖಿ ವೇಳೆ ಲಖನೌ ಮುಂಬೈ ತಂಡವನ್ನು ಸೋಲಿಸಿತ್ತು. ಈಗ ಮುಂಬೈ ಲಖನೌಗೆ ಸೋಲುಣಿಸುವ ಪ್ಲಾನ್ ಮಾಡುತ್ತಿದೆ. ಮುಂಬೈ ಈ ಪಂದ್ಯವನ್ನು ಸೋತರೆ ಅಧಿಕೃತವಾಗಿ ಟೂರ್ನಿಯಿಂದ ಹೊರ ಬಿದ್ದಂತೆ. ಗೆದ್ರೂ ನೇರ ಲಾಭ ಸಿಗುವುದಿಲ್ಲ. ಆದರೆ ಪ್ಲೇ-ಆಫ್ ಲೆಕ್ಕಾಚಾರದಲ್ಲಿರುತ್ತದೆ.
ಲಖನೌ ತಂಡಕ್ಕೆ ಕಾಂಬಿನೇಷನ್ ಸಮಸ್ಯೆ ಕಾಣುತ್ತಿಲ್ಲ. ನಾಯಕ ಕೆ.ಎಲ್. ರಾಹುಲ್ ಮತ್ತು ಕ್ವಿಂಟಾನ್ ಡಿ ಕಾಕ್ ತಂಡಕ್ಕೆ ಬೇಕಾದ ಆಟ ಆಡುತ್ತಿದ್ದಾರೆ. ಮನೀಷ್ ಪಾಂಡೆಯ ಫಾರ್ಮ್ ಸಮಸ್ಯೆ ಆಗಿದೆ. ಹೀಗಾಗಿ ಆಲ್ರೌಂಡರ್ ಕೃಷ್ಣಪ್ಪ ಗೌತಮ್ ಗೆ ಮತ್ತೆ ಅವಕಾಶ ಸಿಗಬಹುದು. ದೀಪಕ್ ಹೂಡಾ, ಆಯೂಷ್ ಬಡೋನಿ ಮತ್ತು ಮಾರ್ಕಸ್ ಸ್ಟೋಯ್ನಿಸ್ ಇನ್ನಿಂಗ್ಸ್ ಕಟ್ಟುವುದರಿಂದ ಹಿಡಿದು ಫಿನಿಷ್ ಮಾಡುವ ತನಕ ನಿರ್ಣಾಯಕ. ಕೃನಾಲ್ ಪಾಂಡ್ಯಾ ಬ್ಯಾಟಿಂಗ್ ತಾಕತ್ತು ಕೂಡ ಗೊತ್ತಿದೆ.
ಬೌಲಿಂಗ್ನಲ್ಲಿ ಜೇಸನ್ ಹೋಲ್ಡರ್ ಮತ್ತು ಆವೇಶ್ ಖಾನ್ ಯಾವ ಹಂತದಲ್ಲಿ ಬೇಕಾದರೂ ಬೌಲಿಂಗ್ ಮಾಡುತ್ತಾರೆ. ಕೃನಾಲ್ ಮತ್ತು ರವಿ ಬಿಷ್ಣೋಯಿ ಸ್ಪಿನ್ ಕೂಡ ಮ್ಯಾಜಿಕ್ ಮಾಡಬಹುದು. ದುಶ್ಮಂತ್ ಚಾಮೀರ ವೇಗದ ಬೌಲಿಂಗ್ಗೆ ಬಲ ನೀಡುತ್ತಾರೆ. ಸ್ಟೋಯ್ನಿಸ್, ಹೂಡ ಮತ್ತು ಗೌತಮ್ ಕೂಡ ಬೌಲಿಂಗ್ ನಲ್ಲಿ ಕೈ ಜೋಡಿಸಬಲ್ಲರು.
ಮುಂಬೈ ತಂಡಕ್ಕೆ ಸಮಸ್ಯೆಗಳು ಹೆಚ್ಚಿವೆ. ರೋಹಿತ್, ಇಶನ್ ಕಿಶನ್ ಫಾರ್ಮ್ ಕಳೆದುಕೊಂಡಿದ್ದಾರೆ. ಸೂರ್ಯ ಕುಮಾರ್ ಯಾದವ್, ಡೆವಾಲ್ಡ್ ಬ್ರೆವಿಸ್ ಮತ್ತು ತಿಲಕ್ ವರ್ಮಾ ಹೋರಾಟವೂ ಫಲ ನೀಡುತ್ತಿಲ್ಲ. ಕೈರಾನ್ ಪೊಲ್ಲಾರ್ಡ್ ವೈಫಲ್ಯವೂ ದುಬಾರಿಯಾಗಿದೆ. ಹೊಸಬ ಹೃತಿಕ್ ಶೋಕಿನ್ ಮೊದಲ ಪಂದ್ಯದಲ್ಲಿ ಮಿಂಚಿದ್ದರು.
ಬೌಲಿಂಗ್ ವೀಕ್ನೆಸ್ ಕೂಡ ಇದೆ. ಜಸ್ ಪ್ರಿತ್ ಬುಮ್ರಾಗೆ ಟೂರ್ನಿಯಲ್ಲಿ ಒಂದೇ ಒಂದು ವಿಕೆಟ್ ಬಿದ್ದಿಲ್ಲ. ಡೇನಿಯಲ್ ಸ್ಯಾಮ್ಸ್ ಕಳೆದ ಪಂದ್ಯದಲ್ಲಿ ಮಿಂಚಿದರೂ ಸ್ಥಿರತೆ ಇಲ್ಲ. ಬಸಿಲ್ ಥಂಪಿ ಮತ್ತು ಜಯದೇವ್ ಉನದ್ಕಟ್ ಮಧ್ಯೆ ಸ್ಥಾನಕ್ಕಾಗಿ ಪೈಪೋಟಿ ಇದೆ. ಮುಂಬೈ ತಂಡ ಏನೇ ಮಾಡಿದರೂ ಅದರಿಂದ ಲಾಭ ಆಗುತ್ತಿಲ್ಲ.
ವಾಂಖೆಡೆಯಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಬೌಲಿಂಗ್ ಗಟ್ಟಿಯಾಗಬೇಕು. ಮೇಲ್ನೋಟಕ್ಕೆ ಲಖನೌ ಫೆವರೀಟ್ ಆಗಿದ್ದರೂ ಮುಂಬೈ ಸಾಮರ್ಥ್ಯ ಕಡೆಗಣಿಸುವ ಹಾಗಿಲ್ಲ.