ಅಕ್ಷರಶಃ ನಾಕೌಟ್ ಮ್ಯಾಚ್ ಇದು. ಡೆಲ್ಲಿ ಗೆದ್ದಿದ್ದರೆ ಆರ್‌ಸಿಬಿ ಪ್ಲೇ-ಆಫ್ನಿಂದ ಹೊರಹೋಗುತ್ತಿತ್ತು. ಆದರೆ ಗೆದ್ದಿದ್ದು ಮುಂಬೈ ಇಂಡಿಯನ್ಸ್. ಟೂರ್ನಿಯಲ್ಲಿ ಉಳಿದುಕೊಂಡಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು. ಹೊರ ಬದ್ದಿದ್ದು ಡೆಲ್ಲಿ ಕ್ಯಾಪಿಟಲ್ಸ್. ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್ 5 ವಿಕೆಟ್ಗಳಿಂದ ಜಯ ಸಾಧಿಸುತ್ತಿದ್ದಂತೆ ಗೆದ್ದು ಬೀಗಿದ್ದು ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ.
ಟಾಸ್ ಗೆದ್ದ ಮುಂಬೈ ಆರಂಭದಲ್ಲೇ ಶಾಕ್ ನೀಡಿತ್ತು. ಡೇವಿಡ್ ವಾರ್ನರ್ 5 ರನ್ ಗಳಿಸಿ ಡೇನಿಯಮ್ ಸ್ಯಾಮ್ಸ್ಗೆ ವಿಕೆಟ್ ಒಪ್ಪಿಸಿದರು. ಮಿಚೆಲ್ ಮಾರ್ಷ್ ರನ್ನು ಖಾತೆ ತೆರೆಯಲು ಬುಮ್ರಾ ಬಿಡಲಿಲ್ಲ. 24 ರನ್ಗಳಿಸಿ ಅಪಾಯಕಾರಿ ಆಗುತ್ತಿದ್ದ ಪೃಥ್ವಿ ಷಾ ಕೂಡ ಬುಮ್ರಾ ಎಸೆತದಲ್ಲಿ ಔಟಾದರು. ಸರ್ಫರಾಜ್ ಖಾನ್ ಆಟಕ್ಕೆ ಮಾಯಾಂಕ್ ಮಾರ್ಕಂಡೆ ಮಂಗಳ ಹಾಡಿದರು.
ಈ ಸಂದರ್ಭದಲ್ಲಿ ಡೆಲ್ಲಿಗೆ ನೆರವಾಗಿದ್ದು ಕ್ಯಾಪ್ಟನ್ ರಿಷಬ್ ಪಂತ್ ಮತ್ತು ರೋವ್ಮನ್ ಪೊವೆಲ್. ರಿಷಬ್ 33 ಎಸೆತಗಳಲ್ಲಿ 39 ರನ್ಗಳಿಸಿದರೆ, ಪೊವೆಲ್ 34 ಎಸೆತಗಳಲ್ಲಿ 43 ರನ್ಗಳಿಸಿ ಮಿಂಚಿದರು. ಆದರೆ ಇವರಿಬ್ಬರೂ ಇನ್ನಿಂಗ್ಸ್ ಫಿನಿಷ್ ಮಾಡದೆ ಇದ್ದಿದ್ದು ದುಬಾರಿ ಆಯಿತು. ಕೊನೆಯಲ್ಲಿ ಅಕ್ಸರ್ ಪಟೇಲ್ ಅಜೇಯ 19 ರನ್ಗಳಿಸಿದರು. 20 ಓವರುಗಳಲ್ಲಿ ಡೆಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್ಗಳಿಸಿತು.
160 ರನ್‌ಗಳ ಟಾರ್ಗೆಟ್ ಬೆನ್ನು ಹತ್ತಿದ ಮುಂಬೈ ಇಂಡಿಯನ್ಸ್ 2 ರನ್ಗಳಿಸಿದ ನಾಯಕ ರೋಹಿತ್ ಶರ್ಮಾ ವಿಕೆಟ್ ಬೇಗನೆ ಕಳೆದುಕೊಂಡಿತು. ಇಶಾನ್ ಕಿಶನ್ ಮತ್ತು ಡಿವಾಲ್ಡ್ ಬ್ರೆವಿಸ್ ಇನ್ನಿಂಗ್ಸ್ಗೆ ಚೇತರಿಕೆ ಕೊಟ್ಟರು. ಕಿಶನ್ 35 ಎಸೆತಗಳಲ್ಲಿ 3 ಫೋರ್ ಮತ್ತು 4 ಸಿಕ್ಸರ್ ನೆರವಿನಿಂದ 48 ರನ್ಗಳಿಸಿ ಔಟಾದರು. ಬ್ರೆವಿಸ್ 37 ರನ್ ಗಳಿಸಿ ಮಿಂಚಿದರು. ಟಿಮ್ ಡೇವಿಡ್ ಆರಂಭದಲ್ಲಿ ಸಿಕ್ಕಿದ ಜೀವದಾನದ ಲಾಭ ಪಡೆದು ಕೇವಲ 11 ಎಸೆತಗಳಲ್ಲಿ 34 ರನ್ ಚಚ್ಚಿದರು., ಇದು ಪಂದ್ಯವನ್ನು ಡೆಲ್ಲಿ ಕೈಯಿಂದ ಜಾರುವಂತೆ ಮಾಡಿತು. ತಿಲಕ್ ವರ್ಮಾ ಕೂಡ 21 ರನ್ಗಳಿಸಿ ಗೆಲುವಿಗೆ ಕೊಡುಗೆ ನೀಡಿದರು. ರಮಣ್ ದೀಪ್ ಸಿಂಗ್ 20ನೇ ಓವರ್ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದರು. ಮುಂಬೈ ಗೆದ್ದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭ್ರಮ ಪಟ್ಟಿತು. ಡೆಲ್ಲಿ ಮಾಡಿದ ತಪ್ಪಿಗೆ ಪ್ಲೇ-ಆಫ್ ಸ್ಥಾನ ಕಳೆದುಕೊಂಡಿತು.