ಮುಂಬೈ ಇಂಡಿಯನ್ಸ್ ತಂಡ ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತ ಬೆನ್ನಲ್ಲೆ, ನಾಯಕ ರೋಹಿತ್ ಶರ್ಮಾ ಅವರಿಗೆ ಪೆಟ್ಟು ಬಿದ್ದಿದೆ.ಒಂದು ಹಂತದಲ್ಲಿ ಪಂದ್ಯ ಮುಂಬೈನತ್ತ ವಾಲಿದಂತೆ ಕಂಡು ಬಂದಿತು. ಆದರೆ ಕೊನೆಯಲ್ಲಿ ಡೆಲ್ಲಿ ಆಟಗಾರರು ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ನಾಲ್ಕು ವಿಕೆಟ್ ಗಳ ಭರ್ಜರಿ ಜಯದ ಮಾಲೆ ತೊಡಿಸಿದರು. ಪ್ರಸಕ್ತ ಋತುವಿನಲ್ಲಿ ಮುಂಬೈ ಕಳಪೆ ಆರಂಭವನ್ನು ಕಂಡಿದೆ. ಈ ನೋವು ತಂಡದ ಮನದಿಂದ ಮಾಸುವ ಮುನ್ನವೇ ರೋಹಿತ್ ಶರ್ಮಾಗೆ ಮತ್ತೊಂದು ಶಾಕಿಂಗ್ ಸುದ್ದಿ ಬಂದಿದೆ.
ಡೆಲ್ಲಿ ವಿರುದ್ಧ ಪಂದ್ಯದಲ್ಲಿ ರೋಹಿತ್ ಪಡೆ ನಿಧಾನಗತಿಯ ಬೌಲಿಂಗ್ ನಡೆಸಿದ್ದು, ತಂಡಕ್ಕೆ ಡಬಲ್ ಶಾಕ್ ನೀಡಿದಂತೆ ಆಗಿದೆ.
ದೆಹಲಿ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಇಶಾನ್ ಕಿಶನ್ ಅವರ ಅಜೇಯ 81 ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 5 ವಿಕೆಟ್ಗೆ 177 ರನ್ ಗಳಿಸಿತು. ನಾಯಕ ರೋಹಿತ್ ಶರ್ಮಾ ಕೂಡ ತಂಡದ ಪರ 41 ರನ್ಗಳ ಉತ್ತಮ ಇನಿಂಗ್ಸ್ ಆಡಿದರು. ಡೆಲ್ಲಿ ಗೆಲ್ಲಲು 178 ರನ್ ಗಳಿಸಬೇಕಾಗಿತ್ತು ಮತ್ತು ಮುಂಬೈ ಬೌಲರ್ಗಳು ಆರಂಭಿಕ ವಿಕೆಟ್ಗಳನ್ನು ಕಬಳಿಸುವ ಮೂಲಕ ಮುಂಬೈ ಪರ ಭರವಸೆ ಮೂಡಿಸಿದ್ದರು, ಆದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಲಲಿತ್ ಯಾದವ್ ಅಜೇಯ 48 ಮತ್ತು ಆಲ್ ರೌಂಡರ್ ಅಕ್ಷರ್ ಪಟೇಲ್ ಅಜೇಯ 38 ರನ್ ಗಳಿಸಿ ಕ್ಯಾಪಿಟಲ್ಸ್ ತಂಡಕ್ಕೆ 4 ವಿಕೆಟ್ ಜಯ ತಂದುಕೊಟ್ಟರು. ಪಂದ್ಯ ಮುಗಿದ ನಂತರ, ನಿಗದಿತ ಸಮಯದೊಳಗೆ ಬೌಲಿಂಗ್ ಪೂರ್ಣಗೊಳಿಸದ ಕಾರಣ ರೋಹಿತ್ ಶರ್ಮಾ ತಪ್ಪಿತಸ್ಥರೆಂದು ಸಾಬೀತಾಯಿತು ಮತ್ತು 12 ಲಕ್ಷ ರೂ. ದಂಡ ವಿಧಿಸಲಾಯಿತು.